
ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಪ್ರಿಯಾ ಕೃಷ್ಣ 1,156 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
2018 ರ ಚುನಾವಣೆಯ ಸಮಯದಲ್ಲಿ ಪ್ರಿಯಾ ಕೃಷ್ಣ ಅವರು 1,020 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು. 5 ವರ್ಷಗಳಲ್ಲಿ ಈ ಆಸ್ತಿ 1,156 ಕೋಟಿ ರೂಗೆ ಹೆಚ್ಚಳವಾಗಿದೆ. ಈ ಮೂಲಕ ಪ್ರಿಯಾ ಕೃಷ್ಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಪ್ರಿಯಾ ಕೃಷ್ಣ ಅವರು ಐದು ಐಷಾರಾಮಿ ವಾಹನಗಳು ಮತ್ತು ಐದು ಅಗೆಯುವ ಯಂತ್ರಗಳು ಸೇರಿದಂತೆ ಎಂಟು ಕಾರುಗಳನ್ನು ಹೊಂದಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ 935 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಮತ್ತು 221.83 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, .99 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಿಯಾಕೃಷ್ಣ ಅವರು ಘೋಷಿಸಿದ್ದಾರೆ.
ಇನ್ನು ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಇವರ ತಂದೆ ಎಂ ಕೃಷ್ಣಪ್ಪ ಅವರ ಬಳಿಯೂ 295 ಕೋಟಿ ರೂ.ಗೂ ಅಧಿಕ ಆಸ್ತಿ ಇದ್ದು, 62.22 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು Rs 107.31 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಹೆಲಿಕಾಪ್ಟರ್ ಹೊಂದಿದ್ದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರು ತಮ್ಮ ಹೆಸರಿನಲ್ಲಿ ಅಥವಾ ಅವರ ಪತ್ನಿ ಹೆಸರಿನಲ್ಲಿ ಒಂದೇ ಒಂದು ವಾಹನವನ್ನೂ ನೋಂದಾಯಿಸಿಕೊಂಡಿಲ್ಲ. ತಮ್ಮ ವಿರುದ್ಧ 19 ಪ್ರಕರಣಗಳು ಬಾಕಿ ಇರುವುದಾಗಿ ಅಫಿಡವಿಟ್'ನಿಂದ ತಿಳಿದುಬಂದಿದೆ. ರೆಡ್ಡಿಯವರ ಬಳಿ ಒಟ್ಟು 37 ಕೋಟಿ ರೂ. ಆಸ್ತಿ ಇದ್ದು, ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಬಳಿಕ 200 ಕೋಟಿ ರುಪಾಯಿಗಳಿಗೂ ಹೆಚ್ಚು ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಯಾವುದೇ ಸಾಲಗಳನ್ನೂ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಸರ್ವಜ್ಞನಗರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರು ಹಲವಾರು ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, 215 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದ್ದು, 37 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿದ್ದಾರೆ. ಜಾರ್ಜ್ ಮತ್ತು ಅವರ ಪತ್ನಿ ಕೂಡ ತಮ್ಮ ಹೆಸರಿನಲ್ಲಿ ಯಾವುದೇ ವಾಹನಗಳನ್ನೂ ನೋಂದಾಯಿಸಿಕೊಂಡಿಲ್ಲ.
ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ಬಳಿ 98 ಕೋಟಿ ರೂ ಆಸ್ತಿಯಿರುವುದಾಗಿ ಘೋಷಿಸಿದ್ದು, 72 ಕೋಟಿ ರೂ. ಸಾಲ ಇರುವುದಾಗಿ ತಿಳಿಸಿದ್ದಾರೆ.
Advertisement