ಜಾಮೀನು ಷರತ್ತಿನಲ್ಲಿ ಸಡಿಲಿಕೆ ಕೋರಿ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಗಾಲಿ ಜನಾರ್ದನರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಗಾಲಿ ಜನಾರ್ದನ್ ರೆಡ್ಡಿ
ಗಾಲಿ ಜನಾರ್ದನ್ ರೆಡ್ಡಿ

ನವದೆಹಲಿ: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಗಾಲಿ ಜನಾರ್ದನರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಜಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಹೊಸ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿಟಿ ರವಿಕುಮಾರ್ ಅವರ ಪೀಠ ನಿರಾಕರಿಸಿದೆ.

ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಷರತ್ತು ಸಡಿಲಿಕೆಯನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿದ್ದರು.

ಜಿ ಜನಾರ್ದನ ರೆಡ್ಡಿ ಅವರ ಮಗಳು ಮತ್ತು ಅವರ ನವಜಾತ ಮಗುವನ್ನು ಭೇಟಿ ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ಜಾಮೀನು ಷರತ್ತಿನಲ್ಲಿ ಕೊಂಚ ಸಡಿಲಿಕೆಗೆ ಅವಕಾಶ ನೀಡಲಾಗಿತ್ತು.

ಈ ಹಿಂದೆ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಕೋಟ್ಯಾಂತರ ರೂಪಾಯಿಯ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ದಿನನಿತ್ಯದ ಆಧಾರದ ಮೇಲೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು ಮತ್ತು ಗಾಲಿ ಜನಾರ್ದನ ರೆಡ್ಡಿ ಅವರಿಗೆ 2022ರ ನವೆಂಬರ್ 6 ರವರೆಗೆ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿತ್ತು. ಆದರೆ, ನವೆಂಬರ್ 7ರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಅವರು ಬಳ್ಳಾರಿಯಲ್ಲಿ ಉಳಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

ಅಲ್ಲದೆ, 2022ರ ನವೆಂಬರ್ 9ರಿಂದ ದೈನಂದಿನ ಆಧಾರದ ಮೇಲೆ ವಿಚಾರಣೆಯನ್ನು ನಡೆಸುವಂತೆ ಮತ್ತು 2022ರ ನವೆಂಬರ್ 9ರಿಂದ ಆರು ತಿಂಗಳ ಅವಧಿಯಲ್ಲಿ ತಪ್ಪದೆ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

ಈ ಹಿಂದೆ ತನ್ನ 2015, ಜನವರಿ 20ರ ಜಾಮೀನು ಆದೇಶವನ್ನು ಮಾರ್ಪಡಿಸಿದ್ದ ನ್ಯಾಯಾಲಯ, ಕರ್ನಾಟಕದ ಮಾಜಿ ಸಚಿವ, ಗಣಿ ಉದ್ಯಮಿ ಮತ್ತು ಕೋಟ್ಯಾಂತರ ರೂಪಾಯಿಯ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಂಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಿತ್ತು.

ರೆಡ್ಡಿ ಅವರನ್ನು ಸೆಪ್ಟೆಂಬರ್ 2011ರಲ್ಲಿ ಬಂಧಿಸಲಾಯಿತು ಮತ್ತು ಜನವರಿ 2015 ರಲ್ಲಿ ಜಾಮೀನು ನೀಡಲಾಯಿತು. ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ಈ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು. ಬಳಿಕ ತಮಗೆ ವಿಧಿಸಿರುವ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com