ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಹೈಕೋರ್ಟ್ ನಕಾರ

ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿದಾರರಿಗೆ (ವಿನಯ್‌ ಕುಲಕರ್ಣಿ) ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ. ಹೇಗೆ ಟಿಕೆಟ್ ನೀಡಿದರು?” ಎಂದು ಹೈಕೋರ್ಟ್‌ ಶುಕ್ರವಾರ ಪ್ರಶ್ನೆ ಮಾಡಿದೆ.
ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ

ಬೆಂಗಳೂರು: ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿದಾರರಿಗೆ (ವಿನಯ್‌ ಕುಲಕರ್ಣಿ) ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ. ಹೇಗೆ ಟಿಕೆಟ್ ನೀಡಿದರು?” ಎಂದು ಹೈಕೋರ್ಟ್‌ ಶುಕ್ರವಾರ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಲಕರ್ಣಿ ಅವರು 30 ದಿನಗಳ ಕಾಲ ಧಾರವಾಡದಲ್ಲಿ ನೆಲೆಸಲು ಅನುಮತಿ ನೀಡುವಂತೆ ಕೋರಿದ್ದ ಹಾಗೂ ಸಾಕ್ಷ್ಯ ನಾಶ ಸಂಬಂಧ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿತು.

ಅರ್ಜಿ ವಜಾ ಮಾಡಿರುವುದಕ್ಕೆ ಸೂಕ್ತ ಕಾರಣಗಳನ್ನು ಆದೇಶದ ಪ್ರತಿಯಲ್ಲಿ ವಿವರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ. ಇದೀಗ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕುಲಕರ್ಣಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ನ್ಯಾಯಸಮ್ಮತ ಚುನಾವಣೆಯ ದೃಷ್ಟಿಯಿಂದ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿದಾರರು ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ? ಹೇಗೆ ಟಿಕೆಟ್ ನೀಡಿದರು” ಎಂದು ಪ್ರಶ್ನಿಸಿತು.

“ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹೀಗಿರುವಾಗ, ನೀವು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಬಹುದು. ಇಲ್ಲಿ ಏಕೆ ಪ್ರಶ್ನೆ ಮಾಡಿದ್ದೀರಿ?” ಎಂದು ಕೇಳಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿತು. ಅಲ್ಲದೇ, ಅರ್ಜಿ ವಜಾಕ್ಕೆ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದು ತಿಳಿಸಿತು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ವಿನಯ ಕುಲಕರ್ಣಿ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ 45 ಸಾಕ್ಷಿಗಳಿದ್ದು, ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಕರಣ ಗಂಭೀರವಾಗಿರುವುದರಿಂದ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಿರುವುದು ಸೇರಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ” ಎಂದರು.

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಹಲವರನ್ನು ಆರೋಪಿಗಳನ್ನಾಗಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ ನಾಲ್ಕು ಷರತ್ತುಗಳನ್ನು ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ವಿಧಿಸಿತ್ತು. ಈಗ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಿರುವುದರಿಂದ ಧಾರವಾಡ ಪ್ರವೇಶಿಸಲು ವಿನಯ್ ಕುಲಕರ್ಣಿ ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಧಾರವಾಡದಲ್ಲಿರಲು 50 ದಿನ ಅನುಮತಿ ಕೋರಿದ್ದ ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿತ್ತು. ಹೀಗಾಗಿ, ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com