ದುಬಾರಿ ದುನಿಯಾ: ಆಗಸ್ಟ್ 1ರಿಂದ ಯಾವುದಕ್ಕೆ ದರ, ಮೌಲ್ಯ, ತೆರಿಗೆ ಹೆಚ್ಚಳ? ಇಲ್ಲಿದೆ ಮಾಹಿತಿ...

ಟೊಮೆಟೊ ದರ ಏರಿಕೆ ಸದ್ಯ ಬೆಲೆ ಏರಿಕೆಯ ಸುದ್ದಿಯ ಕೇಂದ್ರಬಿಂದು. ರಾಜ್ಯದ ಜನ ಬೆಲೆ ಏರಿಕೆಗೆ ರೋಸಿ ಹೋಗಿದ್ದು, ಇಂದಿನಿಂದ ಜನರ ಮೇಲೆ ಮತ್ತೊಂದು ದರ ಏರಿಕೆ ಬರೆ ಬೀಳಲಿದೆ. ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಈಗ ಏಕಾಏಕಿ ಡಬಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟೊಮೆಟೊ ದರ ಏರಿಕೆ ಸದ್ಯ ಬೆಲೆ ಏರಿಕೆಯ ಸುದ್ದಿಯ ಕೇಂದ್ರಬಿಂದು. ರಾಜ್ಯದ ಜನ ಬೆಲೆ ಏರಿಕೆಗೆ ರೋಸಿ ಹೋಗಿದ್ದು, ಇಂದಿನಿಂದ ಜನರ ಮೇಲೆ ಮತ್ತೊಂದು ದರ ಏರಿಕೆ ಬರೆ ಬೀಳಲಿದೆ. ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಈಗ ಏಕಾಏಕಿ ಡಬಲ್ ಆಗಿದೆ.

ಇಂದಿನಿಂದ ನಂದಿನಿ ಹಾಲಿನ(Nandini milk rate) ಮೇಲೆ ಮೂರು ರೂಪಾಯಿ ದರ ಏರಿಕೆಯಾಗಿದ್ದರೆ, ಹೋಟೆಲ್ ಊಟ ತಿಂಡಿ ಕಾಫಿ‌ ಟೀ ಮೇಲೆ ಶೇಕಡಾ 10ರಷ್ಟು ದರ ಏರಿಕೆಯಾಗಿದೆ. ಹೀಗಾಗಿ ಇಂದಿನಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಖಂಡಿತ.

ಕಳೆದ ಒಂದು ವಾರದ ಹಿಂದೆ 100ರ ಗಡಿಯಲ್ಲಿದ್ದ ಟೊಮೆಟೊ ಈಗ ದಿಢೀರ್ ಏರಿಕೆಯಾಗಿದೆ. ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯ ಬಿಸಿ ತಟ್ಟಿದೆ. ಏಕಾಏಕಿಯಾಗಿ ದರ ಏರಿಕೆಯಿಂದ ಕಂಗಲಾದ ನಗರ ಪ್ರದೇಶಗಳ ಮಂದಿ ಟೊಮೆಟೊ ಖರೀದಿಗೆ ಹಿಂಜರಿಯುವಂತಾಗಿದೆ. ಹಾಪ್ ಕಾಮ್ಸ್​ನಲ್ಲಿ ಟೊಮೆಟೊ ಕೆಜಿಗೆ 140 ರೂಪಾಯಿ ಇದ್ದು ಬೆಳ್ಳುಳ್ಳಿ ಕೆಜಿಗೆ 248 ರೂಪಾಯಿ ಆಗಿದೆ. ಶುಂಠಿ ಕೆಜಿಗೆ 360 ರೂಪಾಯಿ ಇದೆ.

ನಂದಿನಿ ಹಾಲಿನ ದರ ಏರಿಕೆ: ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಹೆಚ್ಚಿಸಲಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು., ಹೀಗಾಗಿ ಇಂದಿನಿಂದ ಅಧಿಕೃತವಾಗಿ ಪ್ರತಿ ಲೀ ಹಾಲಿನ ಮೇಲೆ 3 ರೂಪಾಯಿ ಹೆಚ್ಚಿಸಲಾಗಿದೆ.

ಇಂದಿನಿಂದ ಹಾಲಿನ ದರ: ಟೋಲ್ಡ್ ಮಿಲ್ಕ್ – ಹಿಂದಿನ ದರ 39 ರೂ (ಲೀ) – ಪರಿಷ್ಕೃತ ದರ 42 ರೂ
ಹೋಮೋಜೆನೈಸ್ಡ್ 40 ಹಿಂದಿನ ದರ – ಪರಿಷ್ಕೃತ ದರ 43 ರೂ
ಹಸುವಿನ ಹಾಲು ( ಹಸಿರು ಪೊಟ್ಟಣ ) ಹಿಂದಿನ ದರ 43 ರೂ – ಪರಿಷ್ಕೃತ ದರ 46 ರೂ.
ಶುಭಂ ಹಾಲು – ಹಿಂದಿನ ದರ 45 ರೂ – ಇಂದಿನ ದರ 48 ರೂ
ಮೊಸರು ಪ್ರತಿ ಕೆಜಿ – 47 ರೂ. ಹಿಂದಿನ ದರ – ಈಗಿನ ದರ 50 ರೂ
ಮಜ್ಜಿಗೆ 200ml – ಹಿಂದಿನ ದರ 8 ರೂ – ಪರಿಷ್ಕೃತ 9 ರೂ

ಹೊಟೇಲ್ ತಿಂಡಿ-ತಿನಿಸು ದರ ಶೇ,10ರಷ್ಟು ಏರಿಕೆ: ಇತ್ತ ಹೊಟೇಲ್ ತಿಂಡಿ ತಿನಿಸಿನ ಮೇಲೆ ಹತ್ತರಷ್ಟು ದರ ಏರಿಕೆಯಾಗಲಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಹೋಟೆಲ್ ತಿಂಡಿಗಳ ಬೆಲೆ ಶೇಕಡಾ 10ರಷ್ಟು ದರ ಏರಿಕೆ ಮಾಡಲಾಗಿದೆ. ಕಾಫಿ, ಟೀ, ತಿಂಡಿ ದರ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದು ಆಗಸ್ಟ್ 1ರಿಂದಲೇ ದರ ಏರಿಕೆಯಾಗಲಿದೆ.

ಇತರ ತರಕಾರಿಗಳ ಬೆಲೆಯೂ ಏರಿಕೆ: ಟೊಮ್ಯಾಟೊ ಹೊರತುಪಡಿಸಿ, ಇತರ ತರಕಾರಿಗಳ ಬೆಲೆಗಳಲ್ಲಿಯೂ ತೀವ್ರ ಏರಿಕೆ ಕಂಡುಬಂದಿದೆ. ಹಸಿರು ಬಟಾಣಿ, ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರೆಟ್ ಮತ್ತು ಬೀನ್ಸ್‌ಗಳು ಕಳೆದ ಕೆಲವು ವಾರಗಳಲ್ಲಿ ಸುಮಾರು 100 ಪ್ರತಿಶತದಷ್ಟು ಏರಿಕೆಯಾಗಿದೆ. ಇನ್ನು ಹಬ್ಬಹರಿದಿನಗಳ ಸಮಯವಾಗಿದ್ದು ಮುಂದಿನ ದಿನಗಳಲ್ಲಿ ಈ ತರಕಾರಿಗಳು ಮತ್ತು ಇತರ ಅಡುಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಮದ್ಯ-ಅಬಕಾರಿ ಸುಂಕ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ  ಅಬಕಾರಿ ಸುಂಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬಿಯರ್ ಸೇರಿದಂತೆ ಮದ್ಯದ ಬೆಲೆಗಳು ಹೆಚ್ಚಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದಲ್ಲಿ ನಿರ್ಮಿತವಾಗಿರುವ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಸುಂಕವನ್ನು ಎಲ್ಲಾ ಸ್ಲ್ಯಾಬ್‌ಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಮಾಡಿದ್ದಾರೆ. ಬಿಯರ್‌ ಮೇಲಿನ ಸುಂಕವನ್ನು ಶೇಕಡಾ ಹತ್ತರಷ್ಟು ಏರಿಕೆ ಮಾಡಿದ್ದಾರೆ.

ಆಸ್ತಿಯ ಮಾರ್ಗದರ್ಶನ ಮೌಲ್ಯ: ಇತ್ತೀಚಿನ ರಾಜ್ಯ ಬಜೆಟ್ ನಲ್ಲಿ ಸ್ಥಿರಾಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮಾಡಿದೆ. ಇದು ಇಂದು ಜಾರಿಗೆ ಬರಲಿದೆ. ಮಾರ್ಗದರ್ಶನ ಮೌಲ್ಯವು ಆಸ್ತಿಯನ್ನು ನೋಂದಾಯಿಸುವ ಕನಿಷ್ಠ ಮೌಲ್ಯವಾಗಿದೆ.

ಕೆಎಸ್‌ಆರ್‌ಟಿಸಿ ಗುತ್ತಿಗೆ ದರಗಳಲ್ಲಿ ಹೆಚ್ಚಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕೆಎಸ್‌ಆರ್‌ಟಿಸಿ ವಿಧಿಸುವ ಗುತ್ತಿಗೆ ದರಗಳು ಈಗ ದುಬಾರಿಯಾಗಲಿವೆ. ಸರ್ಕಾರವು ಸಾಂದರ್ಭಿಕ ಗುತ್ತಿಗೆ ಬಸ್‌ಗಳ ದರವನ್ನು ಆಗಸ್ಟ್ 1 ರಿಂದ ಜಾರಿಗೆ ತಂದಿದೆ. ಈ ಹೆಚ್ಚಳವು ಪ್ರತಿ ಕಿ.ಮೀಗೆ 2 ರೂಪಾಯಿಗಳಿಂದ 5 ರೂಪಾಯಿ ನಡುವೆ ಇರುತ್ತದೆ. 

ಇತರೆ ವಸ್ತುಗಳೂ ದುಬಾರಿ: ಆಗಸ್ಟ್ 1 ರಿಂದ ಇತರ ವಸ್ತುಗಳು ದುಬಾರಿಯಾಗಲಿವೆ. ಇವುಗಳಲ್ಲಿ ಗಣಿಗಾರಿಕೆಯ ಮೇಲೆ ಪಾವತಿಸಬೇಕಾದ ರಾಯಲ್ಟಿ ಸೇರಿರುವುದರಿಂದ ಜಲ್ಲಿ ಮತ್ತು ಮರಳಿನಂತಹ ಕಟ್ಟಡ ಸಾಮಗ್ರಿಗಳು ದುಬಾರಿಯಾಗುತ್ತವೆ. 

ಶಾಲಾ/ಕಾಲೇಜು ವಾಹನಗಳು, ಕ್ಯಾಬ್‌ಗಳು ಮತ್ತು ಟ್ರಕ್‌ಗಳ ಮೇಲೆ ಪಾವತಿಸಬೇಕಾದ ಇತರ ಮೋಟಾರು ವಾಹನ ತೆರಿಗೆಯು ಆಗಸ್ಟ್ 1 ರಂದು ದುಬಾರಿಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com