ಒಬ್ಬೊಬ್ಬ ಇನ್ಸ್​ಪೆಕ್ಟರ್​ಗೆ 5-6 ಕಡೆ ಅವಕಾಶ ಇದೆ, ಅದನ್ನ ನೋಡಿ ಸರಿ ಮಾಡಬೇಕು, ಸರಿ ಮಾಡುತ್ತೇವೆ: ಡಾ. ಪರಮೇಶ್ವರ್

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪವನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ನಿರಾಕರಿಸಿದ್ದಾರೆ. 
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

ಬೆಂಗಳೂರು: ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪವನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ನಿರಾಕರಿಸಿದ್ದಾರೆ. 

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆಯೆಂದು ಹೇಳುವುದು ಸರಿಯಲ್ಲ. ಕೆಲವು ಸ್ಥಳಗಳಿಗೆ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದರು.ಮಾಜಿ ಸಿಎಂ ಆರೋಪಕ್ಕೆ ಇಂದು ಬೆಂಗಳೂರಿನಲ್ಲಿ ಉತ್ತರಿಸಿದ ಅವರು, ಕೆಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಕಾರಣಾಂತರದಿಂದ ತಡೆಹಿಡಿದಿದ್ದೇವೆ. ಕೆಲವರನ್ನು ಕೆಲವು ಸ್ಥಳಗಳಿಗೆ ವರ್ಗಾವಣೆ ಮಾಡಿದ ನಂತರ ಸರಿಯಾಗಿಲ್ಲ ಎಂದು ಅನಿಸಿದ ನಂತರ ತಡೆಹಿಡಿದಿದ್ದೇವೆ. ಇನ್ನು ಒಂದೆರಡು ದಿನಗಳಲ್ಲಿ ಆ ಗೊಂದಲಗಳೆಲ್ಲನ್ನು ಸರಿಪಡಿಸುತ್ತೇವೆ ಎಂದರು.

ಪೊಲೀಸರ ವರ್ಗಾವಣೆ ತಡೆಹಿಡಿದಿದ್ದಕ್ಕೆ ಕೆಲವು ಶಾಸಕರ ಆಕ್ಷೇಪವಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದಲ್ಲ. ಅಧಿಕಾರಿಗಳು ಎರಡು ಮೂರು ಕಡೆ ಕೇಳಿರುತ್ತಾರೆ, ನಾವು ಒಂದು ಕಡೆ ಹಾಕಿರುತ್ತೇವೆ.ಒಬ್ಬೊಬ್ಬ ಇನ್ಸ್ ಪೆಕ್ಟರ್ ಗೆ ಐದಾರು ಕಡೆ ಅವಕಾಶವಿದೆ. ಅದನ್ನೆಲ್ಲ ನೋಡಿ ಸರಿಪಡಿಸಬೇಕಷ್ಟೆ ಎಂದರು.

ದೆಹಲಿ ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ: ಮೊನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನು ಮಂತ್ರಿಗಳಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಪಕ್ಷದಿಂದ ಒಬ್ಬ ಸಚಿವರು, ಕೋ ಆರ್ಡಿನೇಟರ್ ಗಳ ನೇಮಕ ಮಾಡುವ ಬಗ್ಗೆ ಚರ್ಚೆಯಾಗಿದೆ ಎಂದರು. 

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಚರ್ಚೆಯಾಗಿಲ್ಲ, ಗೆದ್ದಿರುವ ಮಂತ್ರಿಗಳನ್ನು ಕೇಳಿ ಅಂತ ಮಾತುಕತೆಯಾಗಿದೆ. ಸಚಿವರಿಗೆ ವಿಶ್ವಾಸವಿದ್ದರೆ ಅವರು ಹೇಳಬಹುದು ಎಂದು ಸಭೆಯಲ್ಲಿ ತಿಳಿಸಲಾಗಿದೆ ಎಂದರು.

ಇನ್ನು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಗೃಹ ಇಲಾಖೆ ಸಚಿವನಾಗಿದ್ದೆ. ಆಗ ಅವರು ಇಲಾಖೆಯ ವಿಚಾರಗಳಲ್ಲಿ ಯಾವ ರೀತಿ ಸೂಚನೆ ನೀಡುತ್ತಿದ್ದರು, ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದರು ಎಂದು ಗೊತ್ತಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com