ರಾಜ್ಯದ 1,695 ಅನಧಿಕೃತ ಶಾಲೆಗಳನ್ನು ಬಂದ್ ಮಾಡಲಾಗುವುದು: ಶಿಕ್ಷಣ ಸಚಿವ ಮಧು ಬಂಗಾರಪ್ಪ

ರಾಜ್ಯಾದ್ಯಂತ ಒಟ್ಟು 1,695 ಅನಧಿಕೃತ ಶಾಲೆಗಳಿದ್ದು, ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯವನ್ನು ನೀಡಬೇಕಿದೆ, ಸಮಯ ಅವಕಾಶ ನೀಡಿ ಹಂತ ಹಂತವಾಗಿ ಈ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಶುಕ್ರವಾರ ಹೇಳಿದರು.
ಸಭೆ ನಡೆಸುತ್ತಿರುವ ಮಧು ಬಂಗಾರಪ್ಪ
ಸಭೆ ನಡೆಸುತ್ತಿರುವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯಾದ್ಯಂತ ಒಟ್ಟು 1,695 ಅನಧಿಕೃತ ಶಾಲೆಗಳಿದ್ದು, ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯವನ್ನು ನೀಡಬೇಕಿದೆ, ಸಮಯ ಅವಕಾಶ ನೀಡಿ ಹಂತ ಹಂತವಾಗಿ ಈ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಶುಕ್ರವಾರ ಹೇಳಿದರು.

ಶುಕ್ರವಾರ ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ. ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರಕಾರದ ಕರ್ತವ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 26 ಶಾಲೆಗಳು ನೋಂದಣಿಯನ್ನೇ ಮಾಡಿಲ್ಲ, ಅನುಮತಿ ಪಡೆಯದೆ ಉನ್ನತೀಕರಿಸಿರುವ ಶಾಲೆಗಳು 76, ಇತರೆ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಅನುಮತಿ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಪಡೆದಿರುವ 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ 190, ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು 95 ಶಾಲೆಗಳಿವೆ ಎಂದು ಮಾಹಿತಿ ನೀಡಿದರು.

ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುವಂತೆ ಆಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಹೊಸ ಖಾಸಗಿ ಶಾಲೆಗಳ ನೋಂದಣಿ ಕುರಿತು ಮಾತನಾಡಿ, ಇದಕ್ಕಾಗಿ ಜಿಯೋಟ್ಯಾಗ್‌ಗಳನ್ನು ಅಳವಡಿಸಲಾಗುವುದು. ತಿರಸ್ಕೃತಗೊಂಡ ಅರ್ಜಿಗಳಿಗೆ ಸೆಪ್ಟೆಂಬರ್ 16 ರೊಳಗೆ ದಾಖಲೆಗಳ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಹೇಳಿದರು,

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಇಲಾಖೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ಶಾಲೆಗಳಲ್ಲಿ ಅಗ್ನಿ ಸುರಕ್ಷತೆ, ನರ್ಸರಿ ಶಾಲೆಗಳ ನಿಯಂತ್ರಣ, ಶಾಲೆಗಳ ಭೂ ಪರಿವರ್ತನೆಯಂತಹ 10 ಸಲಹೆಗಳು ಮತ್ತು ಬೇಡಿಕೆಗಳನ್ನು ಪಟ್ಟಿಯನ್ನು ನೀಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com