ತನಿಖೆಯಾಗದೆ ಬಾಕಿ ಬಿಲ್ ಪಾವತಿ ಇಲ್ಲ; ಡಿಸೆಂಬರ್-ಜನವರಿಯಲ್ಲಿ 'ಯುವನಿಧಿ' ಜಾರಿ: ಸಿದ್ದರಾಮಯ್ಯ

ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಮುಗಿಸಿದ ಇನ್ನು ಆರು ತಿಂಗಳೊಳಗೆ ಕೆಲಸ ಸಿಗದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಬಿಬಿಎಂಪಿ ಕೇಂದ್ರ ಕಚೇರಿಯ ಲ್ಯಾಬ್ ಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ
ಅಗ್ನಿ ಅವಘಡ ಸಂಭವಿಸಿದ ಬಿಬಿಎಂಪಿ ಕೇಂದ್ರ ಕಚೇರಿಯ ಲ್ಯಾಬ್ ಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ

ಮೈಸೂರು: ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಮುಗಿಸಿದ ಇನ್ನು ಆರು ತಿಂಗಳೊಳಗೆ ಕೆಲಸ ಸಿಗದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಎರಡು ದಿನಗಳ ರಾಜ್ಯ ವಕೀಲರ ಸಮ್ಮೇಳನಕ್ಕೆ ಆಗಮಿಸಿದ್ದ ವೇಳೆ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪದವಿ ಗಳಿಸಿದ ನಿರುದ್ಯೋಗ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಡಿ ತಿಂಗಳಿಗೆ 3 ಸಾವಿರ ರೂಪಾಯಿಯನ್ನು ಮತ್ತು ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿಗಳನ್ನು ನೀಡುವ ಯೋಜನೆ ಇದಾಗಿರುತ್ತದೆ ಇನ್ನು ಆರು ತಿಂಗಳು ಎಂದರೆ ಡಿಸೆಂಬರ್, ಜನವರಿಯಾಗುತ್ತದೆ, ಆ ವೇಳೆಗೆ ಯುವನಿಧಿ ಯೋಜನೆ ಜಾರಿಗೆ ಬರುತ್ತದೆ ಎಂದರು.

ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.6 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಕಾರ್ಯಕ್ಕೆ ಯಾವುದೇ ಸಮಯ ನಿಗದಿ ಇಲ್ಲ. ಈ ತಿಂಗಳಲ್ಲಿ ನೋಂದಣಿ ಮಾಡಿಸುವವರ ಸಂಖ್ಯೆ ಹೆಚ್ಚಬಹುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಯುವನಿಧಿ ಯೋಜನೆ ಜಾರಿಯಾಗುತ್ತದೆ ಎಂದರು.

ಮಳೆ ಕಡಿಮೆಯಾಗಿರುವುದರಿಂದ ತಮಿಳು ನಾಡಿಗೆ ನೀರಿಲ್ಲ: ಈ ಬಾರಿ ಮುಂಗಾರು ಮಳೆ ಕೇರಳದಲ್ಲಿ ವಿಳಂಬವಾಗಿ ಕಡಿಮೆಯಾಗಿರುವುದರಿಂದ, ಕೊಡಗಿನಲ್ಲಿಯೂ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ. ಇದುವರೆಗೆ ಹೆಚ್ಚುವರಿ ನೀರು ಬಂದರೆ ತಮಿಳು ನಾಡಿಗೆ ಬಿಡುತ್ತಿದ್ದೆವು. ಈ ಬಾರಿ ಹೆಚ್ಚುವರಿ ನೀರು ಬಿಡಲು ಆಗಲಿಲ್ಲ. ಹಾಗಾಗಿ ತಮಿಳು ನಾಡು ಸರ್ಕಾರ ತಗಾದೆ ತೆಗೆದಿದೆ, ನಮ್ಮ ರಾಜ್ಯದ ರೈತರ ಪರಿಸ್ಥಿತಿ ನೋಡಿಕೊಂಡು ನಾವು ನೀರು ಬಿಡುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ. 

ತನಿಖೆ ಪೂರ್ಣವಾಗುವವರೆಗೆ ಬಾಕಿ ಬಿಲ್ ಪಾವತಿ ಇಲ್ಲ: ಕರ್ನಾಟಕ ಗುತ್ತಿಗೆದಾರರ ಸಂಘ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರು ಬಾಕಿ ಬಿಲ್‌ ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಹಾಗೂ ರಾಜ್ಯಪಾಲರು ಸೇರಿದಂತೆ ವಿವಿಧೆಡೆ ಮನವಿ ಮಾಡಿದ್ದಾರೆ. ಆದರೆ, ತಾವೇ ಬಿಜೆಪಿ ಸರ್ಕಾರ ಇದ್ದಾಗ ಆರೋಪ ಮಾಡಿದಂತೆ ಶೇ.40 ಪರ್ಸೆಂಟ್‌ ಕಮಿಷನ್ ವಸೂಲಿ ಮಾಡಿದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೂ ಬಾಕಿ ಬಿಲ್‌ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಸಚಿವರು ಹಾಗೂ ಶಾಸಕರು ಶೇ.40 ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ, ಕಮಿಷನ್‌ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೆ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿನ ಕಟ್ಟದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣ ಸಂಬಂಧ ತನಿಖೆಗೆ ಸೂಚಿಸಿದ್ದೇನೆ ಎಂದರು. ಘಟನೆಯಲ್ಲಿ ಒಬ್ಬರಿಗೆ ಶೇ.38ರಷ್ಟು ಸುಟ್ಟು ಗಾಯಗಳಾಗಿವೆ. 48 ಗಂಟೆಗಳ ಕಾಲ ನಿಗಾದಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಎಲ್ಲರನ್ನೂ ಐಸಿಯುಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಘಟನೆಯಲ್ಲಿ ಸಿಬ್ಬಂದಿ ಮುಖ, ಕೈಗಳಿಗೆ ಗಾಯಗಳಾಗಿವೆ, ಅದೃಷ್ಟವಶಾತ್‌ ಕಣ್ಣುಗಳಿಗೆ ಹಾನಿಯಾಗಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಬದುಕುಳಿಯುತ್ತಾರೆಂಬ ವಿಶ್ವಾಸವಿದೆ. ಆದಷ್ಟು ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತೇನೆ. ಘಟನೆ ಹೇಗಾಯ್ತು ಎಂದು ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದೇನೆ. ಬೆಂಕಿ ಪ್ರಕರಣದ ಬಗ್ಗೆ ಎಫ್‌ಐಆರ್ ಸಹ ದಾಖಲಾಗಿದೆ ಎಂದು ಸಿಎಂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com