ಯಾವುದೇ ಕಾರಣಕ್ಕೂ ‘ಶಕ್ತಿ ಯೋಜನೆ’ ರದ್ದಾಗಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ‘ಶಕ್ತಿ ಯೋಜನೆ’ ರದ್ದಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು, ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ಕೂಡ ಈ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮುಂದಿನ 10 ವರ್ಷವೂ ಶಕ್ತಿ ಯೋಜನೆ ಮುಂದುವರಿಯಲಿದೆ. ಒಂದು ಪಕ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲಲ್ಲ. ಮಹಿಳೆಯರು ಪಾಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತಿದೆಯ ಈ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಗಿದೆ.
ಈ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ.
ಶಕ್ತಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುವುದು ಎಂದು ಹೇಳಿದೆ.
ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಸ್ವಾತಂತ್ರ್ಯ ದಿನಾಚರಣೆ ಬಳಿಕ ಸ್ಥಗಿತಗೊಳ್ಳಲಿದೆ ಎಂಬ ವದಂತಿಗಳು ಸಾಮಾಜಿಲ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬಿದ್ದ ಹಲವರು ಗೊಂದಲಕ್ಕೊಳಗಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ