ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಎನ್ ಇಪಿ ಕುರಿತ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿತರರು
ಎನ್ ಇಪಿ ಕುರಿತ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿತರರು

ಬೆಂಗಳೂರು: ರಾಜ್ಯದಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಿಕ್ಷಣವು ರಾಜ್ಯ ವಿಷಯವಾಗಿರುವುದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ನೂತನ  ಶಿಕ್ಷಣ ನೀತಿ ನಿರೂಪಣೆ ಕುರಿತು ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೊಸ ಶಿಕ್ಷಣ ನೀತಿಯನ್ನು ಹೇರುತ್ತಿರುವುದು ಷಡ್ಯಂತ್ರ’ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ, ಬಹುಸಂಸ್ಕೃತಿ ಮತ್ತು ಬಹುತ್ವದ ಸಮಾಜವಿರುವ ಭಾರತದಂತಹ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. 

ಶಿಕ್ಷಣವು ರಾಜ್ಯ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗದು ಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳು ಎನ್ ಇಪಿ ಜಾರಿಗೆ ತರಲು ಹಿಂದೇಟು ಹಾಕುತ್ತಿವೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳು ಎನ್‌ಇಪಿ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿವೆ. ಕೇಂದ್ರ ಪುರಸ್ಕೃತ ಯೋಜನೆಗಳು ಎಲ್ಲ ರಾಜ್ಯಗಳಿಗೂ ಅನ್ವಯವಾಗಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ಇಪಿಯು ಬಡವರು, ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು, ಹಿಂದುಳಿದವರು ಮತ್ತು ಗ್ರಾಮೀಣ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಈ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ, ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ ಎಂದರು. 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎನ್ ಇಪಿಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಸರ್ಕಾರ ಈ ಹಿಂದೆಯೇ ಘೋಷಿಸಿತ್ತು. 

ಎನ್‌ಇಪಿಯನ್ನು ನಾಗ್ಪುರ ಶಿಕ್ಷಣ ನೀತಿ ಎಂದು ಬಣ್ಣಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಎನ್‌ಇಪಿಯನ್ನು ರದ್ದುಪಡಿಸಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು, ಶಿಕ್ಷಣ ಕ್ಷೇತ್ರದ ತಜ್ಞರ ಸಭೆಯನ್ನು ಒಂದು ವಾರದಲ್ಲಿ ತಿಳಿಸಲಾಗುವುದು ಮತ್ತು ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಹೊಸ ನೀತಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್  ಪ್ರಣಾಳಿಕೆಯ ಪ್ರಕಾರ ಎನ್ ಇಪಿ ರದ್ದುಗೊಳಿಸಲು ನಾವು ಬದ್ಧರಾಗಿದ್ದೇವೆ. ಸಂಪುಟದ ಇಬ್ಬರು ಸಚಿವರು ಸಮಿತಿ ರಚನೆಗೆ ಪ್ರಸ್ತಾವನೆಗಳನ್ನು ನೀಡಲಿದ್ದಾರೆ. ಹೊಸ ನೀತಿಯನ್ನು ಶೀಘ್ರದಲ್ಲಿಯೇ ರೂಪಿಸಲಾಗುವುದು. ನಾವು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದೇವೆ, ದೋಷಯುಕ್ತ ಶಿಕ್ಷಣ ನೀತಿಯನ್ನು ಇಲ್ಲಿ ಅಳವಡಿಸಲಾಗುವುದಿಲ್ಲ. ಗುಜರಾತ್, ಉತ್ತರ ಪ್ರದೇಶದಂತಹ ರಾಜ್ಯಗಳು ಎನ್‌ಇಪಿ ಜಾರಿಗೆ ತಂದಿಲ್ಲ, ಕರ್ನಾಟಕಕ್ಕೆ ಏಕೆ ಬೇಕು? ಎಂದು ಪ್ರಶ್ನಿಸಿದರು. 

ಡೀಮ್ಡ್ ವಿಶ್ವವಿದ್ಯಾನಿಲಯಗಳು ಎನ್‌ಇಪಿಯನ್ನು ಮುಂದುವರಿಸಲು ನಿರ್ಧರಿಸುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ತಜ್ಞರ ಸಲಹೆಯಂತೆ ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. "ಶಿಕ್ಷಣ ರಾಜ್ಯದ ವಿಷಯವಾಗಿದೆ, ನಾವು ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com