ಆದಾಯ ಹೆಚ್ಚಳಕ್ಕೆ ಕ್ರಮ: ನಮ್ಮ ಕಾರ್ಗೋ ಸೇವೆ ಬಲಪಡಿಸಲು ಕೆಎಸ್ಆರ್'ಟಿಸಿ ಗೆ 10 ಟ್ರಕ್'ಗಳ ಸೇರ್ಪಡೆ!

ಹೆಚ್ಚುವರಿ 10 ಟ್ರಕ್ ಗಳ ಸೇರ್ಪಡೆಯೊಂದಿಗೆ ನಮ್ಮ ಕಾರ್ಗೋ ಸೇವೆ ಬಲಪಡಿಸಿ, ಆದಾಯ ಹೆಚ್ಚಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೆಚ್ಚುವರಿ 10 ಟ್ರಕ್ ಗಳ ಸೇರ್ಪಡೆಯೊಂದಿಗೆ ನಮ್ಮ ಕಾರ್ಗೋ ಸೇವೆ ಬಲಪಡಿಸಿ, ಆದಾಯ ಹೆಚ್ಚಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.

ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳನ್ನು ಒದಗಿಸುವ ನಮ್ಮ ಕಾರ್ಗೋ ವಿಭಾಗಕ್ಕೆ 6 ಟನ್ ಸಾಮರ್ಥ್ಯದ 10 ಟ್ರಕ್ ಗಳ ಸೇರ್ಪಡೆಗೊಳಿಸಲು ಕೆಎಸ್ಆರ್'ಟಿಸಿ ಮುಂದಾಗಿದೆ. ಇದರೊಂದಿಗೆ ನಮ್ಮ ಕಾರ್ಗೋ ಸೇವೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಸಾರಿಗೆ ನಿಗಮ ಹೊಂದಿದೆ.

ಆರಂಭದಲ್ಲಿ 10 ಟ್ರಕ್ ಗಳನ್ನು ಸೇರ್ಪಡೆಗೊಳಿಸಲಾಗುವುದು. ನಂತರ 10 ಟ್ರಕ್ ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಕೆಎಸ್ಆರ್'ಟಿಸಿ ಸಾಕಷ್ಟು ನಷ್ಟವನ್ನು ಎದುರಿಸಿತ್ತು. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ. ಇದೀಗ ಪಾರ್ಸೆಲ್ ಮತ್ತು ಕೊರಿಯರ್ ಸೇವೆಯನ್ನು ಬಲಪಡಿಸಲು ಮುಂದಾಗಿದ್ದೇವೆ. ವರ್ಷದಿಂದ ವರ್ಷಕ್ಕೆ ಈ ವಿಭಾಗದಲ್ಲಿ ಆದಾಯ ಮೂರು ಪಟ್ಟು ಹೆಚ್ಚಾಗುತ್ತಿದೆ. 2022ರಲ್ಲಿ ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳಿಂದ ಬರೋಬ್ಬರಿ 10 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.

ಪಾರ್ಸೆಲ್‌ಗಳನ್ನು ಸಾಗಿಸಲು ಪ್ರಯಾಣಿಕರ ಬಸ್‌ಗಳ ಮೇಲೆ ನಿಗಮ ಅವಲಂಬಿತವಾಗಿವೆ. ಹೀಗಾಗಿ ತೂಕದ ಮಿತಿಯಿಂದಾಗಿ ನಿಯಂತ್ರಣದಲ್ಲಿ ಪಾರ್ಸೆಲ್ ಮತ್ತು ಕೊರಿಯನ್ ಗಳನ್ನು ಸಾಗಿಸುತ್ತಿದೆ. ಹೀಗಾಗಿ ನಮ್ಮ ಕಾರ್ಗೋ ಸೇವೆಯನ್ನು ಬಲಪಡಿಸಲು ನಿರ್ಧರಿಸಲಾಗಿದ್ದು, 6 ಟನ್ ಸಾಮರ್ಥ್ಯದ ಸಂಪೂರ್ಣ ನಿರ್ಮಿತ 10 ಟ್ರಕ್ ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ಕುರಿತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರ್ಷಾಂತ್ಯದೊಳಗೆ ಸೇವೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳಿವೆ. ಮುಂದಿನ ವರ್ಷದ ವೇಳೆಗೆ ಇನ್ನೂ 10 ಟ್ರಕ್‌ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸಾಕಷ್ಟು ಕ್ಲಸ್ಟರ್‌ಗಳು ಅಭಿವೃದ್ಧಿಗೊಂಡಿವೆ. ಹಣ್ಣಿನ ಕ್ಲಸ್ಟರ್‌ಗಳು, ಜವಳಿ ಕ್ಲಸ್ಟರ್‌ಗಳು, ಫಾರ್ಮಾ ಕ್ಲಸ್ಟರ್‌ಗಳು ಮತ್ತು ಇತರೆ ಕ್ಲಸ್ಟರ್‌ಗಳು ಸಾಕಷ್ಟು ಅಭಿವೃದ್ಧಿಗೊಂಡಿವೆ. ಅವರ ಸಂಪರ್ಕವನ್ನೂ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಅವರ ಬೇಡಿಕೆಗಳನ್ನು ಪೂರೈಸಲು ಮತ್ತು ನಿಗಮದ ಆದಾಯವನ್ನು ಸುಧಾರಿಸಲು ಮುಂದಾಗುತ್ತಿದ್ದೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com