ಕಾರವಾರ: ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು, ಅದರ ಮುಂದುವರಿದ ಆವೃತ್ತಿ, ಟ್ವಿನ್ ಇಂಜಿನ್ ಡೆಕ್ ಆಧಾರಿತ ಯುದ್ಧವಿಮಾನ(TEDBF) ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
“ತೇಜಸ್ ಒಂದು ಉತ್ತಮ ವಿಮಾನ. ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಕೆಲವು ಮೂಲಮಾದರಿಗಳನ್ನು ಖರೀದಿಸಿದ್ದೇವೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಾವು ಅದರಲ್ಲಿ ಹೂಡಿಕೆ ಮಾಡಿದ್ದೇವೆ ಮತ್ತು ಅದು ತನ್ನ ಮೌಲ್ಯವನ್ನು ಸಾಬೀತುಪಡಿಸಿದೆ. ನಾವು ಈಗ TEDBF ಗಾಗಿ ಕಾಯುತ್ತಿದ್ದೇವೆ. ಭಾರತೀಯ ನೌಕಾಪಡೆಯ ಅಗತ್ಯಕ್ಕೆ ತಕ್ಕಂತೆ ಇದನ್ನು ತಯಾರಿಸಬೇಕು'' ಎಂದು ನೌಕಾಪಡೆಯ ಮುಖ್ಯಸ್ಥ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
TEDBF ವಿಮಾನದ ನೌಕಾ ಆವೃತ್ತಿಯಾಗಿದ್ದು, ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದೆ. 2040 ರ ವೇಳೆಗೆ ನೌಕಾಪಡೆಯಲ್ಲಿ 45 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಮೂಲಮಾದರಿಯು 2026 ರ ವೇಳೆಗೆ ಸಿದ್ಧವಾಗಲಿದೆ ಮತ್ತು ಉತ್ಪಾದನೆಯು 2031-32 ರ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. GE-414 ಇಂಜಿನ್‌ನಿಂದ ಚಾಲಿತವಾಗಿರುವ 26-ಟನ್ ದರ್ಜೆಯ ವಿಮಾನವು ಮಡಚಬಹುದಾದ ರೆಕ್ಕೆಗಳಂತಹ ವಿಶೇಷಣಗಳನ್ನು ಹೊಂದಿರುತ್ತದೆ ಮತ್ತುಇದು MiG 29 ವಿಮಾನಗಳನ್ನು ಬದಲಾಯಿಸುವ ಸಾಧ್ಯತೆಯಿದೆ.
ಹೊಸದಾಗಿ ಕಾರ್ಯಾರಂಭ ಮಾಡಿದ ಐಎನ್‌ಎಸ್ ವಿಕ್ರಾಂತ್ ಬಗ್ಗೆ ಮಾತನಾಡಿದ ಹರಿಕುಮಾರ್ ಅವರು, ವಿಮಾನವಾಹಕ ನೌಕೆಯು ಪ್ರಸ್ತುತ ಮಿಗ್ 29 ಗಳನ್ನು ಹೊಂದಿದೆ. ಆದರೆ ಶೀಘ್ರದಲ್ಲೇ ಅದರಲ್ಲಿ ರಫೇಲ್‌ಗಳನ್ನು ಹೋಸ್ಟ್ ಮಾಡಲಾಗುವುದು ಎಂದು ಹೇಳಿದರು.
ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ವಸತಿ ಸಮುಚ್ಚಯವನ್ನು ಉದ್ಘಾಟಿಸಲು ಕಾರವಾರಕ್ಕೆ ಬಂದಿದ್ದ ಹರಿಕುಮಾರ್ ಅವರು, ಇದು (ಕಾರವಾರ) ಸ್ಮಾರ್ಟ್ ನೇವಲ್ ಬೇಸ್ ಆಗಿದೆ. ಭದ್ರತಾ ಅಂಶವನ್ನು ಪರಿಗಣಿಸಿದರೆ ಇದು ಬಹಳ ಮಹತ್ವದ್ದಾಗಿದೆ ಎಂದರು.
Advertisement