'ಕಾವೇರಿ'ದ ವಿವಾದ: ಇಂದು ಸರ್ವಪಕ್ಷ ಸಭೆ, ತಮಿಳು ನಾಡು ಕ್ಯಾತೆ ಎದುರಿಸಲು ಸರ್ಕಾರ ಮಹತ್ವದ ತೀರ್ಮಾನ ಸಾಧ್ಯತೆ

ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಆಗುತ್ತಿರುವ ಹೊತ್ತಿನಲ್ಲಿ ತಮಿಳು ನಾಡಿನೊಂದಿಗಿನ ಕಾವೇರಿ ಜಲವಿವಾದ ಮತ್ತೆ ಭುಗಿಲೆದ್ದಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳು ನಾಡಿಗೆ ಕರ್ನಾಟಕ ನೀರು ಬಿಡುತ್ತಿರುವುದಕ್ಕೆ ವಿಪಕ್ಷಗಳು, ರಾಜ್ಯ ರೈತ ಸಂಘ ಸೇರಿದಂತೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
'ಕಾವೇರಿ'ದ ವಿವಾದ: ಇಂದು ಸರ್ವಪಕ್ಷ ಸಭೆ, ತಮಿಳು ನಾಡು ಕ್ಯಾತೆ ಎದುರಿಸಲು ಸರ್ಕಾರ ಮಹತ್ವದ ತೀರ್ಮಾನ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಆಗುತ್ತಿರುವ ಹೊತ್ತಿನಲ್ಲಿ ತಮಿಳು ನಾಡಿನೊಂದಿಗಿನ ಕಾವೇರಿ ಜಲವಿವಾದ ಮತ್ತೆ ಭುಗಿಲೆದ್ದಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳು ನಾಡಿಗೆ ಕರ್ನಾಟಕ ನೀರು ಬಿಡುತ್ತಿರುವುದಕ್ಕೆ ವಿಪಕ್ಷಗಳು, ರಾಜ್ಯ ರೈತ ಸಂಘ ಸೇರಿದಂತೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಈ ಬಾರಿ ಮುಂಗಾರು ಮಳೆ ರಾಜ್ಯಕ್ಕೆ ಕಡಿಮೆಯಾಗಿದ್ದು ಇಂತಹ ಸಂದರ್ಭದಲ್ಲಿ ತಮಿಳು ನಾಡಿಗೆ ನೀರು ಬಿಡುತ್ತಿರುವುದು ಸರ್ಕಾರದ ನಡೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಪ್ರಮುಖ ಅಣೆಕಟ್ಟುಗಳು ಬರಿದಾಗುತ್ತಿದ್ದು, ರಾಜ್ಯದ ರೈತ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬರಗಾಲ ಸೃಷ್ಠಿಯಾಗಿರುವ ಹೊತ್ತಲ್ಲೇ ಕಾವೇರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತಗೆದಿದೆ.

ಇಂದು ಸರ್ವಪಕ್ಷ ಸಭೆ: ರಾಜ್ಯ ಸರ್ಕಾರದ ನಡೆಗೆ ವಿಪಕ್ಷಗಳು ಸಹ ರಾಜ್ಯಾದ್ಯಂತ ಪ್ರತಿಭಟನೆಗಳನ್ನ ಆರಂಭಿಸಿದ್ದು, ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಸಿದ್ದರಾಮಯ್ಯ ಸರ್ಕಾರ ಸರ್ವಪಕ್ಷ ಸಭೆಯನ್ನು ಇಂದು ಬುಧವಾರ ಬೆಳಗ್ಗೆ 11 ಗಂಟೆಗೆ ಕರೆದಿದ್ದು ರಾಜ್ಯದ ಎಲ್ಲಾ ಪಕ್ಷದ ಮುಖಂಡರು,ಶಾಸಕರು ಹಾಗೂ ಸಂಸದರಿಗೆ ಆಹ್ವಾನಿಸಿದೆ.

ಇಂದು ನಡೆಯುವ ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಚಾರವಾಗಿ ವಿಪಕ್ಷಗಳ ಸಲಹೆಯನ್ನು ಸರ್ಕಾರ ಪಡೆಯಲಿದ್ದು, ರಾಜ್ಯದ ಪರಿಸ್ಥಿತಿ ಕುರಿತು ಸರ್ವಪಕ್ಷದ ನಾಯಕರು ಚರ್ಚಿಸಲಿದ್ದಾರೆ. ಅಲ್ಲದೇ, ಕಾವೇರಿ ನದಿ ನೀರು ಬಿಡುಗಡೆ ಸಂಬಂಧದಲ್ಲಿ ಸರಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬ ಕುತೂಹಲವಿದೆ.

ಮಳೆ ಅಭಾವದಿಂದ ರಾಜ್ಯದ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿಲ್ಲ. ಆದರೂ, ತಮಿಳುನಾಡು ಸರ್ಕಾರ ಕರ್ನಾಟಕ ತನ್ನ ಪಾಲಿನ ಕಾವೇರಿ ನೀರು ಹರಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಕಾನೂನು ಹೋರಾಟ ಹೇಗಿರಬೇಕೆಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ಸರ್ವಪಕ್ಷ ಸಭೆಯಲ್ಲಿ ನಡೆಯಲಿದ್ದು, ಮೂರೂ ಪಕ್ಷಗಳ ರಾಜಕೀಯ ನಾಯಕರು, ಕಾನೂನು ಸಲಹೆಗಾರರು ನೀಡುವ ಸಲಹೆ, ಅಭಿಪ್ರಾಯಗಳು ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿ ಎದುರಿಸಲು ನೆರವಾಗುವ ಸಾಧ್ಯತೆ ಇದೆ. 

ಇನ್ನೂ ಸರ್ವಪಕ್ಷ ಸಭೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ಕಾವೇರಿ ಹಾಗೂ ಮಹದಾಯಿ ಜಲ ವಿವಾದಗಳ ಬಗ್ಗೆ ಚರ್ಚಿಸಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಲು ನಾಳೆ ಬೆಳಿಗ್ಗೆ 11 ಗಂಟೆಗೆ ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಅಗತ್ಯವಾದ ಪ್ರಮಾಣಕ್ಕಿಂತ ಕಡಿಮೆ ನೀರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೂಡ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳ ಆದೇಶ ಪಾಲನೆ ಮಾಡಬೇಕಾಗಿದೆ.

ಒಂದೆಡೆ ಕನ್ನಡಿಗರ ಹಿತರಕ್ಷಣೆ, ಇನ್ನೊಂದೆಡೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾದ ಸಂದಿಗ್ಧ ಸಮಯದಲ್ಲಿ ನಾವಿರುವುದರಿಂದ ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು, ಸಂಸತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ರಚನಾತ್ಮಕ ಸಲಹೆ, ಸಹಕಾರ ನೀಡುವ ಮೂಲಕ ನಾಡಿನ ಹಿತರಕ್ಷಣೆಗೆ ನಮ್ಮೊಂದಿಗೆ ಕೈಜೋಡಿಸುತ್ತೀರೆಂಬ ಭರವಸೆಯಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಸರಕಾರದ ಮೇಲ್ಮನವಿ ಆಧರಿಸಿ ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಪ್ರತ್ಯೇಕ ತ್ರಿಸದಸ್ಯ ಪೀಠ ರಚಿಸಿದೆ. ಇದರಿಂದಾಗಿ ಕಾವೇರಿ ನೀರಿನ ಸಂಬಂಧದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪುನಃ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಯೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 

ಸರ್ವಪಕ್ಷಗಳ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರು ಮಾಜಿ ಮುಖ್ಯಮಂತ್ರಿಗಳು, ಸಂಸದರು, ನಾನಾ ಪಕ್ಷಗಳ ಮುಖಂಡರು, ರೈತರು, ಕಾನೂನು ತಜ್ಞರು ಹಾಗೂ ಅಂತಾರಾಜ್ಯ ಜಲವಿವಾದ ಪ್ರಕರಣಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ತಂಡದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಕಾವೇರಿ ಜಲ ವಿವಾದದ ಜೊತೆಗೆ ಕೃಷ್ಣಾ, ಮಹದಾಯಿ ಜಲ ವಿವಾದಗಳು ಮತ್ತು ರಾಜ್ಯದ ಅಣೆಕಟ್ಟೆಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ವಿದ್ಯುತ್‌ ಉತ್ಪಾದನೆ, ಕುಡಿಯುವ ನೀರು ಪೂರೈಕೆಯಲ್ಲಿ ಆಗಬಹುದಾದ ವ್ಯತ್ಯಯಗಳ ಬಗ್ಗೆಯೂ ಚರ್ಚೆ ನಡೆಸಿ ಸರ್ಕಾರ ಈ ಪರಿಸ್ಥಿತಿ ನಿಭಾಯಿಸಲು ಸರ್ವಪಕ್ಷಗಳ ಮುಖಂಡರಿಂದ ಸಲಹೆ ಪಡೆಯುವ ಸಾಧ್ಯತೆ ಇದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಈ ಮಹತ್ವದ ಸಭೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಸ್‌.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ, ಎಂ. ವೀರಪ್ಪ ಮೊಯ್ಲಿ, ಜಗದೀಶ್‌ ಶೆಟ್ಟರ್‌, ಡಿ.ವಿ. ಸದಾನಂದಗೌಡ ಸೇರಿದಂತೆ ಮೂರೂ ಪಕ್ಷಗಳ ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ರಾಜ್ಯದ ಎಲ್ಲ 28 ಸಂಸದರು ಹಾಗೂ ಸುಪ್ರೀಂ ಕೋರ್ಚ್‌ನಲ್ಲಿ ರಾಜ್ಯದ ಪರ ವಾದ ಮಂಡಿಸಲಿರುವ ಹಿರಿಯ ನ್ಯಾಯವಾದಿಗಳಾದ ಶ್ಯಾಮ್‌ ದಿವಾನ್‌, ಎಸ್‌.ಎಸ್‌.ಜವಳಿ, ಮೋಹನ್‌ ವಿ. ಕಾತರಕಿ ಅವರ ಜೊತೆಗೆ ಇನ್ನಿತರೆ ಪ್ರಮುಖ ಕಾನೂನು ಸಲಹೆಗಾರರರನ್ನೂ ಸರ್ಕಾರ ಈ ಸಭೆಗೆ ಆಹ್ವಾನಿಸಿದೆ.

ಡಿ.ಕೆ.ಶಿವಕುಮಾರ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಇಂಧನ ಸಚಿವ ಕೆ.ಜೆ.ಜಾಜ್‌ರ್‍, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಹಾಗೂ ಪ್ರಕಾಶ್‌ ಹುಕ್ಕೇರಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com