PGCET 2023: ಪಿಜಿಸಿಇಟಿ ಸ್ಥಗಿತಗೊಳಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ವಿದ್ಯಾರ್ಥಿಗಳು ನಿರಾಳ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET) 2023 ಅನ್ನು ಮುಂದೂಡಿದೆ. ಈ ಹಿಂದೆ ಸೆಪ್ಟೆಂಬರ್ 9 ಮತ್ತು 10ಕ್ಕೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET) 2023 ಅನ್ನು ಮುಂದೂಡಿದೆ. ಈ ಹಿಂದೆ ಸೆಪ್ಟೆಂಬರ್ 9 ಮತ್ತು 10ಕ್ಕೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. 

ಆಗಸ್ಟ್ 7 ರಂದು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎರಡು ತಿಂಗಳ ಮುಂಚಿತವಾಗಿ ಪ್ರವೇಶ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಹೇಗೆ ಒತ್ತಡಕ್ಕೊಳಗಾಗಿದ್ದಾರೆ ಎಂಬುದರ ಕುರಿತು ವಿವರವಾದ ವರದಿಯನ್ನು ಪ್ರಕಟಿಸಿತ್ತು.

ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ), ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಎಂಸಿಎ), ಮಾಸ್ಟರ್ ಆಫ್ ಆರ್ಕಿಟೆಕ್ಚರ್ (M.Arch), ಮಾಸ್ಟರ್ ಇನ್ ಟೆಕ್ನಾಲಜಿ (ಎಂಟೆಕ್) ಮತ್ತು ಮಾಸ್ಟರ್ ಆಫ್ ಇಂಜಿನಿಯರಿಂಗ್ (ಎಂಇ) ನಂತಹ ಪಿಜಿ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಸೀಟುಗಳನ್ನು ಪಡೆಯಲು ಪಿಜಿಸಿಇಟಿ ಪರೀಕ್ಷೆಯನ್ನು ಬರೆಯಬೇಕು. 

ಆಗಸ್ಟ್ 4ರಂದು ತನ್ನ ಅಧಿಸೂಚನೆಯಲ್ಲಿ, ಪಿಜಿಸಿಇಟಿ ಅನ್ನು ಸೆಪ್ಟೆಂಬರ್ 9 ಮತ್ತು 10 ರಂದು ನಡೆಸಲಾಗುವುದು ಎಂದು ಕೆಇಎ ಘೋಷಿಸಿತು. ಇದು ಹಿಂದಿನ ವರ್ಷದ ವೇಳಾಪಟ್ಟಿಗೆ ಹೋಲಿಸಿದರೆ ಎರಡು ತಿಂಗಳು ಮುಂಚಿತವಾಗಿತ್ತು.

ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತಯಾರಾಗುವ ಸಮಯ ಬಹಳ ಕಡಿಮೆ ಇದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು. ಬಿಬಿಎ, ಬಿಸಿಎ ಮತ್ತು ಇತರ ಪದವಿಪೂರ್ವ ವಿದ್ಯಾರ್ಥಿಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ವೈವಾ ಮತ್ತು ಪ್ರಾಜೆಕ್ಟ್ ರಿಪೋರ್ಟ್ ಪ್ರೆಸೆಂಟೇಷನ್ಸ್‌ಗಳನ್ನು ನೀಡುತ್ತಾರೆ. ಅಲ್ಲದೆ, ಯುಜಿ ಕೋರ್ಸ್‌ಗಳ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗುವುದು ಎಂದು ಕೆಲವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತಿಳಿಸಿದ್ದವು. ಹೀಗಾಗಿ, ಪಿಜಿಸಿಇಟಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಬೇಕೇ, ಅಂತಿಮ ಸೆಮಿಸ್ಟರ್ ಪರೀಕ್ಷೆ ಅಥವಾ ಪಿಜಿಸಿಇಟಿಗೆ ತಯಾರಿ ನಡೆಸಬೇಕೇ ಎಂಬ ಗೊಂದಲದಲ್ಲಿದ್ದರು.

ಯುಜಿ ಅಂತಿಮ ಸೆಮಿಸ್ಟರ್ ಮತ್ತು ಪಿಜಿಸಿಇಟಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಮಯದ ಅಭಾವದಿಂದ ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದರ ಕುರಿತು ಟಿಎನ್ಐಇ ವಿವರವಾದ ವರದಿ ಮಾಡಿತ್ತು.

ಕೆಲವು ವಿಶ್ವವಿದ್ಯಾನಿಲಯಗಳು ಸೆಪ್ಟೆಂಬರ್‌ನಲ್ಲಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿದ್ದರಿಂದ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಿಜಿಸಿಇಟಿಯನ್ನು ಮುಂದೂಡಲಾಗಿದೆ ಎಂದು ಆಗಸ್ಟ್ 23ರಂದು ಕೆಇಎ ಹೊರಡಿಸಿದ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ. ಪರಿಷ್ಕೃತ ಪಿಜಿಸಿಇಟಿ ವೇಳಾಪಟ್ಟಿಯನ್ನು ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com