

ಬೆಂಗಳೂರು: ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ನಾಮಕರಣ ಮಾಡುವುದಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಸಮ್ಮಿಲನ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬಣ್ಣಿಸಿದ್ದಾರೆ.
ಭಾನುವಾರ ಇಲ್ಲಿ ಮೂವರು ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಿದ ನಂತರ ಮಾತನಾಡಿದ ಅವರು, ಈ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಹೆಸರಿಸಿರುವುದು ದೇಶದ ಸಂಸ್ಕೃತಿಗೆ ಪ್ರಧಾನಿಯವರ ಬದ್ಧತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
'ಇಷ್ಟು ವರ್ಷಗಳ ಕಾಲ ಶಿವ ತನ್ನ ತಲೆಯ ಮೇಲೆ ಧರಿಸಿರುವ ಚಂದ್ರಾಭರಣವನ್ನು ಯಾರೊಬ್ಬರೂ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಂದೇಶವನ್ನು ಇಡೀ ಜಗತ್ತಿಗೆ ಕೊಂಡೊಯ್ಯಲು ನಮಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಆಧ್ಯಾತ್ಮಿಕತೆಯು ಯಾವಾಗಲೂ ವೈಜ್ಞಾನಿಕ ಮನಸ್ಸನ್ನು ಪ್ರೇರೇಪಿಸುತ್ತದೆ' ಎಂದು ಹೇಳಿದರು.
'ಮನುಷ್ಯನು ಅತ್ಯಂತ ಬಿಸಿಯಾದ ಮತ್ತು ತಂಪಾದ ಸ್ಥಳಗಳಲ್ಲಿಯೂ ಬದುಕಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದರೆ ಇತರ ಜೀವಿಗಳ ಬಗ್ಗೆ ಹೇಳಲಾಗುವುದಿಲ್ಲ. ನಮ್ಮ ವಿಜ್ಞಾನಿಗಳು ಅದನ್ನೇ ಮಾಡಿದ್ದಾರೆ. ಅವರು ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಅಷ್ಟೇ ಸುಲಭವಾಗಿ ಅನುಸರಿಸಿದ್ದಾರೆ' ಎಂದು ಹೇಳಿದರು.
ಇಸ್ರೋ ವಿಜ್ಞಾನಿಗಳ ಒಗ್ಗಟ್ಟಿನ ಶ್ರಮದ ಫಲವಾಗಿ ಚಂದ್ರಯಾನ-3 ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಘನತೆ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ, ವಿಜ್ಞಾನ ಮತ್ತು ಆಧ್ಯಾತ್ಮವನ್ನೂ ಬೆಸೆಯುವಂತೆ ಮಾಡಿದೆ ಎಂದು ಬೊಮ್ಮಾಯಿ ಪುನರುಚ್ಚರಿಸಿದರು.
ಗಗನಯಾನ್ ಮಿಷನ್
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಬೊಮ್ಮಾಯಿ, ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್ ಅವರ ಕೈಕುಲುಕುವ ಅದೃಷ್ಟ ನನಗೆ ಸಿಕ್ಕಿದ್ದು, ಈಗ ಇಸ್ರೋದ ಇಚ್ಛೆಯಂತೆ ಚಂದ್ರನ ಮೇಲೆ ಕಾಲಿಡಲಿರುವ ಭಾರತೀಯನೊಂದಿಗೂ ಕೈಕುಲುಕುವ ಭರವಸೆ ಇದೆ ಎಂದು ಹೇಳಿದರು.