ಚಾಮುಂಡಿ ದೇವಿಗೆ ಹರಕೆ ತೀರಿಸಿದ ಸರ್ಕಾರದ 'ಜೋಡೆತ್ತು'ಗಳು; 'ಗೃಹಲಕ್ಷ್ಮಿ' ಕಾರ್ಡ್ ಇಟ್ಟು 2,000 ಕಾಣಿಕೆ ನೀಡಿದ ಸಿಎಂ, ಡಿಸಿಎಂ!

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕಿ ಅಧಿಕಾರಕ್ಕೆ ಬರಬೇಕೆಂದು ಮತ್ತು ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಬೇಕೆಂದು ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿ ಮುಂದೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹರಕೆ ಹೊತ್ತುಕೊಂಡಿದ್ದರು.
ಸಾಂಸ್ಕ್ರತಿಕ ನಗರಿ ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಹರಕೆ ಸಲ್ಲಿಸಿದ ಸಿಎಂ, ಡಿಸಿಎಂ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಾಂಸ್ಕ್ರತಿಕ ನಗರಿ ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಹರಕೆ ಸಲ್ಲಿಸಿದ ಸಿಎಂ, ಡಿಸಿಎಂ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮೈಸೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಮುಖ್ಯವಾದದ್ದು ಗೃಹಲಕ್ಷ್ಮಿ ಯೋಜನೆ. ಕಳೆದ ಮೇಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕಿ ಅಧಿಕಾರಕ್ಕೆ ಬರಬೇಕೆಂದು ಮತ್ತು ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಬೇಕೆಂದು ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿ ಮುಂದೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹರಕೆ ಹೊತ್ತುಕೊಂಡಿದ್ದರು.

ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳ ಮೇಲಾಗಿದೆ. ಸರ್ಕಾರದ ಮೂರು ಗ್ಯಾರಂಟಿ ಯೋಜನೆಗಳು ಜಾರಿಯಾಗಿ ಈಗ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಚಾಲನೆ ಸಿಗಲಿದೆ.

ಈ ಹೊತ್ತಿನಲ್ಲಿ ಯೋಜನೆ ಯಶಸ್ವಿಯಾಗಿ ಸುಗಮವಾಗಿ ಜಾರಿಯಾಗಲೆಂದು ಸರ್ಕಾರದ ಜೋಡೆತ್ತುಗಳೆದು ಕರೆಸಿಕೊಳ್ಳುವ ಸಿಎಂ ಮತ್ತು ಡಿಸಿಎಂ ಇಂದು ಬೆಳಗ್ಗೆ ಚಾಮುಂಡಿ ದೇವಿ ಮುಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್​ (KPCC) ವತಿಯಿಂದ ಹರಕೆ ತೀರಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಚಾಮುಂಡಿ ದೇವಿಗೆ ಹಸಿರು ಮತ್ತು ಕೆಂಪು ಸೀರೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತಯ ಫಲ ಸಮರ್ಪಣೆ ಮಾಡುವ ಮೂಲಕ ಹೊತ್ತುಕೊಂಡಿದ್ದ ಹರಿಕೆಯನ್ನು ತೀರಿಸಿದರು. 

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮೇ 9ರಂದು ಚಾಮುಂಡೇಶ್ವರಿ ಎದುರು ಅವರು ವಾಗ್ದಾನ ಮಾಡಿದ್ದರು. ಇದೀಗ ಆ ಬೇಡಿಕೆ ಈಡೇರಿದ್ದರಿಂದ ಹರಕೆ ತೀರಿಸಿದ್ದಾರೆ. ಅಲ್ಲದೇ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಮೊದಲ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಯನ್ನು ಕಾಣಿಕೆ ಸಂದಾಯ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಅವರು ತಲಾ 2 ಸಾವಿರ ರೂಪಾಯಿ ಕಾಣಿಕೆ ಹಾಕಿದರು.

ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೇ 9ರಂದು ನಾನು ಮತ್ತು ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದೆವು. 5 ಗ್ಯಾರಂಟಿ ಜಾರಿಗೊಳಿಸುವುದಾಗಿ ಹರಕೆ ಹೊತ್ತಿದ್ದೆವು. ಅದರಂತೆ ಇದೀಗ ಇಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇವೆ. ನಾಳೆ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.

ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಚಾಮುಂಡೇಶ್ವರಿ ದೇವಿ ಮುಂದೆ ಗ್ಯಾರಂಟಿ ಕಾರ್ಡ್​ ಇಟ್ಟು ಬೇಡಿಕೊಂಡಿದ್ದೆವು. ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಶಕ್ತಿ ಕೊಡುವಂತೆ ಬೇಡಿಕೊಂಡಿದ್ದೆವು. ಈಗ ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದೆ. ಹೀಗಾಗಿ ಇಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ.

ಆರಂಭದಲ್ಲಿ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಚಾಮುಂಡೇಶ್ವರಿಯ ನೆಲದಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿಶೇಷ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ನಡೆಯುತ್ತಿದ್ದು, 12,600 ಕಡೆ ನೇರ ಪ್ರಸಾರದ ಮೂಲಕ‌ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com