ಗೃಹಲಕ್ಷ್ಮಿ ಯೋಜನೆ: ಕರ್ನಾಟಕದಲ್ಲಿನ ಅಭಿವೃದ್ಧಿ ಕೆಲಸಗಳು ದೇಶಾದ್ಯಂತ ಪ್ರತಿಧ್ವನಿಸಲಿದೆ- ರಾಹುಲ್ ಗಾಂಧಿ

ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ದೇಶಾದ್ಯಂತ ಪ್ರತಿಧ್ವನಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಮೈಸೂರು: ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ದೇಶಾದ್ಯಂತ ಪ್ರತಿಧ್ವನಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಹಾರಾಜ‌ ಕಾಲೇಜು ಮೈದಾನದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಗೆ ಅದ್ಧೂರಿ‌‌ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, 'ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ, ಇವೆಲ್ಲ ಅಸಾಧ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದರು. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದಿದ್ದರು. ಆದರೆ ಈಗ ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ. ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವೂ ಅನುಷ್ಠಾನಕ್ಕೆ ಬರಲಿದೆ' ಎಂದರು.

ಇದೇ ವೇಳೆ 'ಗೃಹಲಕ್ಷ್ಮಿ ಯೋಜನೆಯು ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಇಂಥ ಯೋಜನೆ ಬೇರೆಲ್ಲೂ ಇಲ್ಲ. ನಾವು ಕೊಡುವ 2 ಸಾವಿರ ರೂ ಸಣ್ಣದಲ್ಲ. ಅದು ಮಹಿಳೆಗೆ ಸಂರಕ್ಷಣೆ ನೀಡುತ್ತದೆ.‌ ಅದನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ರಾಜ್ಯದ ಮಹಿಳೆಯರೇ ರಾಜ್ಯದ ಏಳಿಗೆಗೆ ಕಾರಣ. 75 ವರ್ಷಗಳ‌ ಅಭಿವೃದ್ಧಿ‌‌ ನಿಮ್ಮಿಂದಲೇ ಆಗಿದೆ. ಮುಕ್ತವಾಗಿ ನಮ್ಮೊಂದಿಗೆ ಮಾತಾಡಿ, ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ಆಗುವುದಿಲ್ಲ ಎಂದರೆ ಅದನ್ನೇ ಹೇಳುತ್ತೇವೆ. ಸಾಧ್ಯವಾಗುವುದಾರೆ ಮಾಡಿಯೇ ತೀರುತ್ತೇವೆ. ಇದು‌ ನಮ್ಮ ಯೋಜನೆಯಲ್ಲ; ನಿಮ್ಮ ಯೋಜನೆ. ಕಾಂಗ್ರೆಸ್ ಪಕ್ಷದ‌‌ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ. ನೀವು ನಮಗೆ ಯೋಜನೆಯ ದಾರಿ ತೋರಿಸಿದಿರಿ' ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

'ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿಮೀ ನಡೆದಿದ್ದೆ. ಬೆಲೆ ಏರಿಕೆಯು ಮಹಿಳೆಯರ ಮೇಲೆ ಬರೆ ಹಾಕಿದೆ ಎಂದು ಆಗ ಅನ್ನಿಸಿತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದ್ದರ ಏಟು ಮಹಿಳೆಯರ ಮೇಲೇ ಬೀಳುತ್ತದೆ. ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ನಡೆಯುತ್ತಾ ನಡೆಯುತ್ತಾ, ಮಹಿಳೆಯರೇ ಈ ರಾಜ್ಯದ ಅಡಿಪಾಯ. ಅವರಿಲ್ಲದೆ ಈ ರಾಜ್ಯ ನಿಲ್ಲದು ಎಂಬುದು ಅರಿವಿಗೆ ಬಂದಿತ್ತು. ಮರದ ಬೇರು ಕಾಣದ ರೀತಿಯಲ್ಲಿ, ಮನೆಯಲ್ಲೆ ಉಳಿದ ಮಹಿಳೆಯರು, ಯಾವುದೇ ಊರಾಗಿರಲಿ, ಇಡೀ ರಾಜ್ಯದ ಭದ್ರ ಬುನಾದಿ ನೀವೇ ಎಂದರು. 

'ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ‌‌ ದಿನವಾದ ಇಂದು ನಾಡಿನ ಕೋಟ್ಯಂತರ ಅಕ್ಕ ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಕೇಂದ್ರ ಸರ್ಕಾರವು ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಇಬ್ಬರು ಮೂವರಿಗಷ್ಟೇ ಅಭಿವೃದ್ಧಿಯ ಹೊಣೆ‌ ನೀಡಲಾಗಿದೆ. ಆದರೆ ಕರ್ನಾಟಕದ ಐದು ಭರವಸೆಗಳು ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ‌ ನೆರವಾಗಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ' ಎಂದು ರಾಹುಲ್ ಗಾಂಧಿ ಹೇಳಿದರು.

ಈ ವಿದ್ಯುಕ್ತ ಕಾರ್ಯಕ್ರಮದಲ್ಲಿ ಎಐಸಿಸಿ‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಶಾಸಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಶೇಷ ಅತಿಥಿ ರಾಹುಲ್ ಗಾಂಧಿ ದೀಪ ಬೆಳಗಿಸಿ ಯೋಜನೆ ಉದ್ಘಾಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com