ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ನಿನ್ನೆ ತಮ್ಮ ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಂಡು ವೃತ್ತಿಧರ್ಮದ ಬಗ್ಗೆ ಮಾತನಾಡಿದ್ದಾರೆ.
ಅದು ಮೈಸೂರಿನ ಕೆ ಆರ್ ಆಸ್ಪತ್ರೆ ನವೀಕೃತ ಸುಟ್ಟ ಗಾಯಗಳ ಚಿಕಿತ್ಸಾ ಕಟ್ಟಡ ಮತ್ತು ರೇಡಿಯೊಲಜಿ ವಿಭಾಗ ಹಾಗೂ ಎಂಆರ್ ಐ ಯಂತ್ರೋಪಕರಣ ಉದ್ಘಾಟನೆ ಕಾರ್ಯಕ್ರಮ ಸಂದರ್ಭದಲ್ಲಿ.
ನಾನು ಚಿಕ್ಕವನಿರುವಾಗ ನನಗೂ ಏಪ್ರಾನ್ ಹಾಕೊಂಡು, ಸ್ಟೆತಾಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಎನ್ನುವ ಆಸೆ ಇತ್ತು. ಕೆಆರ್ ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ಗೆ ನಾನು ಹೈಸ್ಕೂಲ್ ಓದುವಾಗ ಬರುತ್ತಿದ್ದೆ. ಆಗೆಲ್ಲಾ ನನಗೆ ಈ ಆಸೆ ಬರುತ್ತಿತ್ತು. ನಮ್ಮಪ್ಪನಿಗೂ ನಾನು ವೈದ್ಯನಾಗಬೇಕೆಂದು ಆಸೆ ಇತ್ತು. ಆದರೆ, ನನಗೆ ಮೆಡಿಕಲ್ ಸೀಟೇ ಸಿಗಲಿಲ್ಲ, ಮೆಡಿಕಲ್ ಸೀಟು ಸಿಕ್ಕಿದ್ದರೆ ವೈದ್ಯನಾಗುತ್ತಿದ್ದೆ, ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮನಬಿಚ್ಚಿ ಮಾತನಾಡಿದರು.
ಯಾವುದೇ ವೃತ್ತಿಯಾದರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ ಎಂದು ಕೂಡ ಸಿಎಂ ಕಿವಿಮಾತು ಹೇಳಿದರು. ಪ್ರತಿಯೊಬ್ಬರೂ ಅವರವರ ವೃತ್ತಿ ಘನತೆಯನ್ನು ಕಾಪಾಡಿಕೊಳ್ಳಬೇಕು. ವೈದ್ಯ ವೃತ್ತಿ ಬಹಳ ಶ್ರೇಷ್ಠವಾದದ್ದು. ನಮ್ಮ ತಪ್ಪಿನಿಂದ ಯಾವ ರೋಗಿಯೂ ಸಾಯಬಾರದು, ನರಳಬಾರದು ಎನ್ನುವ ವೃತ್ತಿ ಘನತೆ ಪ್ರತಿಯೊಬ್ಬ ವೈದ್ಯರಲ್ಲೂ ಇರಬೇಕು ಎಂದು ಕರೆ ನೀಡಿದರು. ಕೆಆರ್ ಮೆಡಿಕಲ್ ಕಾಲೇಜು ಸಾವಿರಾರು ವೈದ್ಯರನ್ನು ಈ ದೇಶಕ್ಕೆ ಕೊಟ್ಟಿದೆ. ದೇಶದ ನಾನಾ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಈ ಕಾಲೇಜಿನಲ್ಲಿ ಸಿದ್ದಗೊಂಡ ವೈದ್ಯರು ವೃತ್ತಿ ಘನತೆ ಹೆಚ್ಚಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಆರ್ ಆಸ್ಪತ್ರೆಗೆ ಕಾಯಕಲ್ಪ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ 1,200 ಹಾಸಿಗೆಗಳಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬೇಡಿಕೆ ಇದೆ. ಇದನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Advertisement