ತುಮಕೂರು: ಹಾವು ಕಚ್ಚಿದ್ದು ಅರಿವಿಗೆ ಬಾರದೆ ವೈದ್ಯ ವಿದ್ಯಾರ್ಥಿ ಸಾವು; ಘಟಿಕೋತ್ಸವದ ಬಳಿಕ ಹೃದಯ ವಿದ್ರಾವಕ ಘಟನೆ!
ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದ ವೈದ್ಯ ವಿದ್ಯಾರ್ಥಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಮೃತರು. ಘಟಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಹೆಗ್ಗೆರೆಯಲ್ಲಿರುವ ಮನೆಯ ಬಳಿ ಕಾರು ನಿಲ್ಲಿಸುವ ಸಮಯದಲ್ಲಿ ಹಾವು ಕಚ್ಚಿದೆ. ಇದನ್ನು ಗಮನಿಸದೆ ಮನೆಗೆ ತೆರಳಿದ್ದು, ಒಮ್ಮೆಲೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ಹಾವು ಕಡಿದು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಮೃತ ಆದಿತ್ ಬಾಲಕೃಷ್ಣನ್ ಕೇರಳದ ತ್ರಿಶೂರ್ ಮೂಲದವರು. ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (SSAHE) ಯ 12ನೇ ಘಟಿಕೋತ್ಸವ ಸಮಾರಂಭದಲ್ಲಿ ತಿರುವನಂತಪುರಂ ಸಂಸದ ಶಶಿ ತರೂರ್ ಅವರಿಂದ ಹಿಂದಿನ ದಿನ ಅವರು ತಮ್ಮ ಎಂಬಿಬಿಎಸ್ ಪದವಿ ಪ್ರಮಾಣಪತ್ರವನ್ನು ಪಡೆದಿದ್ದರು.
ಸಮಾರಂಭದ ನಂತರ ಆದಿತ್, ತಮ್ಮ ತಾಯಿ ಲತಾ ಬಾಲಕೃಷ್ಣನ್ ಮತ್ತು ಅವರ ಸಂಬಂಧಿ ಜೊತೆ ಹೆಗ್ಗೆರೆ ಗ್ರಾಮದಲ್ಲಿರುವ ಬಾಡಿಗೆ ನಿವಾಸಕ್ಕೆ ಮರಳಿದ್ದರು. ರಾತ್ರಿ ಕಾರು ನಿಲ್ಲಿಸುತ್ತಿದ್ದಾಗ ಹಾವು ಕಚ್ಚಿದೆ. ಆದರೆ ಆ ವಿಷಯ ಅವರ ಗಮನಕ್ಕೆ ಬಾರಲಿಲ್ಲ. ಸಹಜವಾಗಿಯೇ ಮೂರನೇ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿದ್ದಾರೆ.
ಮನೆಗೆ ಹೋದ ನಂತರ, ಆದಿತ್ ಶೌಚಾಲಯಕ್ಕೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಒಂದು ಗಂಟೆ ಕಳೆದರೂ ಶೌಚಾಲಯದಿಂದ ಹೊರಗೆ ಬಾರದೆ ಇದ್ದಾಗ ತಾಯಿ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಆದಿತ್ ತಲೆಗೆ ಗಾಯವಾಗಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ