ಭೂಮಿ ಮೇಲಿರಿ, ಹಾರಾಡಬೇಡಿ: ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ

ಬಾಕಿ ಉಳಿದಿರುವ ಕಡತಗಳನ್ನು ತೆರವುಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ತರಾಟೆಗೆ ತೆಗೆದುಕೊಂಡರು.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಬಾಕಿ ಉಳಿದಿರುವ ಕಡತಗಳನ್ನು ತೆರವುಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ತರಾಟೆಗೆ ತೆಗೆದುಕೊಂಡರು.

ವಿಕಾಸ ಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ತಹಸೀಲ್ದಾರರ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಆರು ತಿಂಗಳಿಗಿಂತ ಒಂದು ವರ್ಷದ ವರೆಗಿನ ಅತಿಹೆಚ್ಚಿನ ಸಂಖ್ಯೆಯ ತಕರಾರು ಅರ್ಜಿಗಳನ್ನು ವಿಲೇಗೊಳಿಸದೆ ಬಾಕಿ ಉಳಿಸಿಕೊಂಡಿದ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರ ವಿರುದ್ಧ ಸಚಿವರು ಹರಿಹಾಯ್ದರು. ಅಲ್ಲದೆ, ತಹಸೀಲ್ದಾರ್ ಹಾಗೂ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 1 ವರ್ಷಕ್ಕಿಂತ ಹಳೆಯ ತಕರಾರು ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಹಸೀಲ್ದಾರ್ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹಳೆಯ 1318 ಪ್ರಕರಣಗಳು ರಾಯಚೂರಿನಲ್ಲಿ ಬಾಕಿ ಇದ್ದರೆ, ತುಮಕೂರಿನ ಎಸಿ ನ್ಯಾಯಾಲಯದಲ್ಲಿ 6590 ಪ್ರಕರಣಗಳು ಬಾಕಿ ಇವೆ. ಕೋಲಾರದಲ್ಲಿ ಆರು ತಹಸೀಲ್ದಾರರಿದ್ದೂ ಸಹ ಕಳೆದ 20 ದಿನಗಳಲ್ಲಿ ಕೇವಲ 11 ಪ್ರಕರಣಗಳನ್ನು ಮಾತ್ರ ವಿಲೇವಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯ ಬಗ್ಗೆಯೇ 458 ದೂರುಗಳು ದಾಖಲಾಗಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರ್ಕಾರ ತಲೆತಗ್ಗಿಸಬೇಕಾ? ಎಂದು ಪ್ರಶ್ನಿಸಿದರು. ಅಲ್ಲದೆ, ಜನವರಿ 15ರ ಒಳಗಾಗಿ ಆರು ತಿಂಗಳಿಗಿಂತ ಹಳೆಯ ಎಲ್ಲ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಜನವಸತಿ ಪ್ರದೇಶಗಳನ್ನು ಶೀಘ್ರವೇ ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ಸೂಚನೆ ನೀಡುತ್ತಿದ್ದಾಗ್ಯೂ ಜಿಲ್ಲಾಧಿಕಾರಿಗಳು ಅರ್ಹ ತಾಂಡ-ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ವಿಳಂಬಮಾಡುತ್ತಿರುವುದೇಕೆ?,.. ಬಡಜನರ ಕೆಲಸಕ್ಕೆ ಮೀನಾಮೇಷ ಎಣಿಸಬೇಡಿ ಎಂದು ತರಾಟೆ ತೆಗೆದುಕೊಂಡರು.

ಕಂದಾಯ ಗ್ರಾಮ ಘೋಷಣೆ ಜೊತೆ ಜೊತೆಗೇ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ಸಿದ್ದಪಡಿಸುವ ಕೆಲಸವೂ ಆಗಬೇಕು. ಜನವರಿ 10ರೊಳಗೆ ಹಕ್ಕುಪತ್ರ ವಿತರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.

ಇದೇ ವೇಳೆ ಇ-ಆಫೀಸ್ ಅನ್ನು ಸಮರ್ಪಕವಾಗಿ ಬಳಸದ ಅಧಿಕಾರಿಗಳನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು.

ಹೆಸರಿಗೆ ಇ-ಆಫೀಸ್ ಅನುಷ್ಠಾನಗೊಳಿಸಿ ಶೇ.100 ರಷ್ಟು ಅನುಷ್ಠಾನ ಆಗದಿದ್ದರೆ ನಮ್ಮ ಉದ್ದೇಶವೇ ವ್ಯರ್ಥ ಎಂದು ಕಿಡಿಕಾರಿದರು.

 ಚಾಮರಾಜನಗರದಂತಹ ಅತ್ಯಂತ ಹಿಂದುಳಿದ ಜಿಲ್ಲೆಯಲ್ಲೂ ಇ-ಆಫೀಸ್ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಆದರೆ ಮುಂದುವರೆದ ಜಿಲ್ಲೆಗಳಿಗೇನು ಕಷ್ಟ? ಎಂದು ಅಸಮಾಧಾನ ಹೊರಹಾಕಿದರು.

ಮುಂದಿನ ಸೋಮವಾರದಿಂದಲೇ ಎಸಿ-ಡಿಸಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಶೇ.100 ರಷ್ಟು ಇ-ಆಫೀಸ್ ಮೂಲಕವೇ ನಿರ್ವಹಿಸಬೇಕು. ಭೌತಿಕ ದಾಖಲೆಗಳನ್ನು ಇನ್ನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈತರ ಒಟ್ಟಾರೆ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವುದು, ಬಗರ್ ಹುಕುಂ ಸಮಿತಿ ರಚನೆಗೆ ಒತ್ತು ನೀಡುವುದು, ರೆಕಾರ್ಡ್ ರೂಂ ನಿರ್ವಹಣೆ ಮತ್ತು ಡಿಜಿಟಲೀಕರಣ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com