ಬೆಳಗಾವಿ ಅಧಿವೇಶನ: ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿ ಕಲಾಪಕ್ಕೆ ಬಿಜೆಪಿ ಸಜ್ಜು, ಗ್ಯಾರಂಟಿ ವಿಚಾರ ಹಿಡಿದು ಹರಿಹಾಯುವ ಸಾಧ್ಯತೆ

ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಳ್ಳಲಿರುವ ರಾಜ್ಯ ವಿಧಾನಮಂಡಲದ 10 ದಿನಗಳ ಚಳಿಗಾಲದ ಅಧಿವೇಶನವು ಗ್ಯಾರಂಟಿ ವಿಚಾರ ಸೇರಿ ಹಲವು ವಿಷಯಗಳು ಮತ್ತು ವಿವಾದಗಳ ಬಗ್ಗೆ ಆಸಕ್ತಿದಾಯಕ ಚರ್ಚೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಳ್ಳಲಿರುವ ರಾಜ್ಯ ವಿಧಾನಮಂಡಲದ 10 ದಿನಗಳ ಚಳಿಗಾಲದ ಅಧಿವೇಶನವು ಗ್ಯಾರಂಟಿ ವಿಚಾರ ಸೇರಿ ಹಲವು ವಿಷಯಗಳು ಮತ್ತು ವಿವಾದಗಳ ಬಗ್ಗೆ ಆಸಕ್ತಿದಾಯಕ ಚರ್ಚೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ವಿಧಾನಸಭೆಯ ಸೋಲು ಹಾಗೂ ನಾಯಕತ್ವ ನೇಮಕದ ವಿಳಂಬದಿಂದ ಕುಗ್ಗಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಭರ್ಜರಿ ಟಾನಿಕ್ ನೀಡಿದ್ದು, ಈಗಾಗಲೇ ತನ್ನ ಜೊತೆಗೂಡಿರುವ ಜೆಡಿಎಸ್ ಜೊತೆಗೆ ಒಗ್ಗೂಡಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉತ್ಸಾಹದಿಂದ ಅಣಿಯಾಗಿದೆ.

ಸುವರ್ಣ ವಿಧಾನಸೌದದಲ್ಲಿ ಡಿ.4ರ ಸೋಮವಾರದಿಂದ ಡಿ.15ರವರೆಗೆ ಎರಡು ವಾರಗಳ ಕಾಲ ಸದನದ ಕಾರ್ಯಕಲಾಪಗಳು ನಡೆಯಲಿವೆ. ವಿಶೇಷವಾಗಿ ಈ ಬಾರಿಯ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ಸೃಷ್ಟಿಸುವ ಎಲ್ಲಾ ಲಕ್ಷಣಗಳಿವೆ. ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ಇತ್ತೀಚೆಗೆ ಹಿಂಪಡೆದಿರುವ ಬಗ್ಗೆಯೂ ವಾಗ್ದಾಳಿ ನಡೆಸುವ ಸಾಧ್ಯತೆಯಿದೆ.

ಈ ನಡುವೆ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಸರ್ಕಾರ ಸುವರ್ಣ ವಿಧಾನಸೌಧದ ಮುಂದೆ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗಳ ಕಡಿಮೆ ಮಾಡಲು ಪ್ರಯತ್ನ ನಡೆಸಿದೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಸುವರ್ಣಸೌಧದ ಬಳಿ ಧರಣಿ ನಡೆಸುವುದನ್ನು ತಡೆಯಲು ವಿವಿಧ ಸಂಘಟನೆಗಳ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಅಧಿವೇಶನದಲ್ಲಿ ಕನಿಷ್ಠ ಏಳರಿಂದ ಎಂಟು ಪ್ರಮುಖ ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆಯಿದ್ದು, ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಅಧಿವೇಶನವನ್ನು ಪರಿಣಾಮಕಾರಿಯಾಗಿ ನಡೆಸಲು ಸರ್ಕಾರ ವಿಸ್ತೃತ ವ್ಯವಸ್ಥೆ ಮಾಡಿದೆ. ಬೆಳಗಾವಿಯಲ್ಲಿ ಕಳೆದ ಚಳಿಗಾಲದ ಅಧಿವೇಶನದಲ್ಲಿ ಅನೇಕ ಶಾಸಕರು ಗೈರುಹಾಜರಾಗಿದ್ದರು. ಆದರೆ, ಈ ಬಾರಿ ಉತ್ತಮ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಭರವಸೆ ಇದೆ ಎಂದರು.

ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಚರ್ಚೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಪ್ರಯತ್ನಿಸಲಾಗುವುದು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯವನ್ನು ನೀಡುತ್ತೇನೆ. ಬರ, ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳಂತಹ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ಅಧಿವೇಶನವನ್ನು ಪರಿಣಾಮಕಾರಿಯಾಗಿ ನಡೆಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಬೆಳಗಾವಿ ಪೊಲೀಸ್ ಕಮಿಷನರ್ ಎಸ್ ಎನ್ ಸಿದ್ದರಾಮಪ್ಪ ಮಾತನಾಡಿ, ಅಧಿವೇಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಡಲು 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿಯ ಹೆಚ್ಚಿನ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಲಾಡ್ಜ್‌ಗಳನ್ನು ಸರ್ಕಾರವು ಸಾವಿರಾರು ಅತಿಥಿಗಳಿಗಾಗಿ ಕಾಯ್ದಿರಿಸಿದೆ, ಇದರಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಮತ್ತು ಇತರರು 10 ದಿನಗಳ ಕಾಲ ತಂಗಲಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com