ವಿಧಾನ ಪರಿಷತ್ ಕಲಾಪ: ಎನ್ಇಪಿ ರದ್ದು ಕುರಿತು ಬಿಜೆಪಿ-ಕಾಂಗ್ರೆಸ್‌ ನಡುವೆ ವಾಗ್ವಾದ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಕುರಿತು ಗುರುವಾರ ಬಿಸಿಬಿಸಿ ಚರ್ಚೆಗೆ ವಿಧಾನ ಪರಿಷತ್‌ ಸಾಕ್ಷಿಯಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಕುರಿತು ಗುರುವಾರ ಬಿಸಿಬಿಸಿ ಚರ್ಚೆಗೆ ವಿಧಾನ ಪರಿಷತ್‌ ಸಾಕ್ಷಿಯಾಯಿತು.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಎನ್‌ಇಪಿಯನ್ನು ತಿರಸ್ಕರಿಸುವ ಮೊದಲು ಅದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ಸಮಿತಿಯನ್ನೇಕೆ ಸರ್ಕಾರ ರಚಿಸಲಿಲ್ಲ ಎಂದು ಪ್ರಶ್ನಿಸಿದರು.

ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ದೇಶದಲ್ಲೇ ಏಕ ರೀತಿಯ ಶಿಕ್ಷಣದ ಧ್ಯೇಯೋದ್ದೇಶದಿಂದ ರೂಪಿಸಿರುವ ಎನ್‌ಇಪಿಯನ್ನು ರಾಜ್ಯ ಸರ್ಕಾರ ರಾಜಕೀಯ ಕಾರಣಗಳಿಗಾಗಿ ರದ್ದು ಮಾಡುತ್ತಿರುವುದು ಸಲ್ಲದು. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳು ಎನ್‌ಇಪಿ ಅಳವಡಿಸಿಕೊಳ್ಳುವಾಗ, ಒಂದು ಕೋಟಿಗೂ ಹೆಚ್ಚಿನ ಮಕ್ಕಳು ಪ್ರತ್ಯೇಕ ಪಠ್ಯಕ್ರಮ ಅನುಸರಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ ಎಂದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, 2020ಕ್ಕಿಂತ ಮೊದಲು ಮಕ್ಕಳು ಉತ್ತಮವಾಗಿ ಓದಿಲ್ಲವೇ? ದೇಶ, ವಿದೇಶಗಳಲ್ಲಿ ಹೆಸರು ಮಾಡಿಲ್ಲವೇ? ರಾಜ್ಯ ಶಿಕ್ಷಣ ನೀತಿಯನ್ನು ಏಕೆ ಲಘುವಾಗಿ ಪರಿಗಣಿಸುವಿರಿ ಎಂದು ಹೇಳಿದರು.

ಬಳಿಕ ರಾಜ್ಯ ಶಿಕ್ಷಣ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ಎನ್‌ಇಪಿ ಬಡವರು ಉನ್ನತ ಶಿಕ್ಷಣ ಪಡೆಯದಂತೆ ಮಾಡುತ್ತದೆ. ಅವೈಜ್ಞಾನಿಕ ನೀತಿಯಿಂದಾಗಿ ಹಲವು ಕಾಲೇಜುಗಳು ಈಗಾಗಲೇ ಬಾಗಿಲು ಮುಚ್ಚಿವೆ ಎಂದು ಹೇಳಿದರು.

ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಗದ್ದಲದ ಮಧ್ಯೆಯೇ ಎಲ್ಲರ ಮಾತನ್ನೂ ಆಲಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉತ್ತರ ನೀಡುವುದಾಗಿ ಹೇಳಿದರು.

ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಕೆ.ಎಂ.ಪ್ರಾಣೇಶ್, ಒಂದೇ ವಿಷಯದ ಮೇಲೆ ಅರ್ಧದಿನ ನಡೆದ ಕಲಾಪವನ್ನು ಮರುದಿನಕ್ಕೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com