ಎನ್​ಇಪಿ ಚರ್ಚೆಯಲ್ಲಿ ಪ್ರಧಾನಿ ಮೋದಿ ಪದವಿ ಕುರಿತು ಪ್ರಸ್ತಾಪ: ಪರಿಷತ್ ಕಲಾಪದಲ್ಲಿ ತೀವ್ರ ಗದ್ದಲ

ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಪ್ರಧಾನಿ ಮೋದಿ ಕುರಿತು ಪ್ರಸ್ತಾಪ ಮಾಡಿದ್ದಕ್ಕೆ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಶುಕ್ರವಾರ ವಾಕ್ಸಮರ ನಡೆಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಪ್ರಧಾನಿ ಮೋದಿ ಕುರಿತು ಪ್ರಸ್ತಾಪ ಮಾಡಿದ್ದಕ್ಕೆ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಶುಕ್ರವಾರ ವಾಕ್ಸಮರ ನಡೆಯಿತು.

ಪ್ರಧಾನಿ ಪದವನ್ನು ಕಡತದಿಂದ ತೆಗೆಯುವಂತೆ ಸಭಾಪತಿ ರೂಲಿಂಗ್ ನೀಡಿದರೂ ಸದನದಲ್ಲಿ ಕೋಲಾಹಲ ಮುಂದುವರೆದಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಕಲಾಪದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ.ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ, ಛಲವಾದಿ ನಾರಾಯಣಸ್ವಾಮಿ ಹಾಗೂ ಇತರರು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ, ಆತಂಕ ತಲೆದೋರಿದೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, "ರಾಜ್ಯದಲ್ಲಿ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಯಾವುದೇ ರೀತಿಯ ಮೂಲಸೌಕರ್ಯ ಕಲ್ಪಿಸಿಲ್ಲ, ಬೋಧಕ ಸಿಬ್ಬಂದಿಗೆ ತರಬೇತಿ ನೀಡಲಿಲ್ಲ. ಹೊಸ ವ್ಯವಸ್ಥೆಗೆ ಒಗ್ಗುವಂತೆ ತರಬೇತಿ ನೀಡಲಿಲ್ಲ ಇದು ಆತುರದ ಮತ್ತು ಅವೈಜ್ಞಾನಿಕ ನಿರ್ಧಾರವಾಗಿದೆ. ಹಾಗಾಗಿ ನಾವು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹೊಸ ಶಿಕ್ಷಣ ನೀತಿಯನ್ನು ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ" ಎಂದು ಸಮರ್ಥಿಸಿಕೊಂಡರು.

ವಿದ್ಯಾರ್ಥಿಗಳು ವ್ಯಾಸಂಗದ ನಡುವೆಯೇ ಯಾವುದೇ ವಿವಿಗೆ ಹೋಗುವ ಅವಕಾಶ ಸರಿಯಲ್ಲ, ಬೇರೆ ದೇಶದಲ್ಲಿ ಈ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಇಲ್ಲಿ ತರುವುದು ಸರಿಯಲ್ಲ. ನಮ್ಮ ಸಮಾಜದಲ್ಲಿನ ಪರಿಸ್ಥಿತಿ, ನಮ್ಮಲ್ಲಿನ ಸ್ಥಿತಿಗತಿ, ಮಕ್ಕಳ ದಕ್ಷತೆ, ಸರ್ಕಾರದ ಪರಿಸ್ಥಿತಿ ಎಲ್ಲವನ್ನೂ ಆಲೋಚನೆ ಮಾಡಬೇಕು. ವಿದೇಶದಲ್ಲಿನ ಪದ್ಧತಿ ನಮ್ಮಲ್ಲಿಗೆ ಎಲ್ಲವೂ ಸರಿ ಹೊಂದುವುದಿಲ್ಲ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ವ್ಯವಸ್ಥೆ ಇರಬೇಕು. ಅಲ್ಲದೆ ನೂತನ ಶಿಕ್ಷಣ ನೀತಿ ಜಾರಿಗೆ ರಚಿಸಲಾಗಿದ್ದ ಕಾರ್ಯಪಡೆ ಶಿಫಾರಸುಗಳನ್ನೂ ಕಡೆಗಣಿಸಿ ಕೇವಲ ಪಾಲಿಸಿಯನ್ನು ಮಾತ್ರ ಅನುಷ್ಠಾನಕ್ಕೆ ತಂದಿದ್ದಾರೆ" ಎಂದರು.

ಎನ್ಇಪಿ ಯಾವುದೇ ಪೂರ್ವತಯಾರಿ ಇಲ್ಲದ, ನಿರ್ದಿಷ್ಟ ಗುರಿ ಇಲ್ಲದ ಪಾಲಿಸಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಬೇಕು ಎಂದು ಕ್ರಾಂತಿಕಾರಕ ನೀತಿ ತಂದಿದ್ದೇವೆ, ಇದೂವರೆಗೆ ಮಾಡಿದವರು ಏನೂ ಮಾಡಿಲ್ಲ ಎಂದು ಬಿಂಬಿಸುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇಡಿ, ಐಟಿ ಮೇಲೆ ನಮಗೆ ಅನುಮಾನಗಳಿದ್ದವು, ಈಗ ಯುಜಿಸಿ ಮೇಲೆ ನಮಗೆ ಅನುಮಾನ ಬರುತ್ತಿದೆ. ಯುಜಿಸಿ ಸಂಸ್ಥೆ ವಿಶ್ವವಿದ್ಯಾಲಯಗಳಲ್ಲಿ ಸೆಲ್ಫಿ ಪಾಯಿಂಟ್ ತಂದಿದೆ. ಇದನ್ನು ಯಾವ ರೀತಿ ಒಪ್ಪಲು ಸಾಧ್ಯ? ಇಲ್ಲಿನ ಸೆಲ್ಫಿಯಲ್ಲಿ ಯಾರ ಫೋಟೋ ಬರಲಿದೆ? ಪ್ರಧಾನಿ ಏನು ಓದಿದ್ದಾರೆ, ಯಾವ ಪದವಿ ಎಂದು ಎಲ್ಲರಿಗೂ ಗೊಂದಲ ಇದೆ. ಹೀಗಿರುವಾಗ ಇದರಿಂದ ಯಾವ ರೀತಿ ಸಂದೇಶ ಹೋಗಲಿದೆ ಗೊತ್ತಿಲ್ಲ" ಎಂದು ಟೀಕಿಸಿದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದರಿಂದಾಗಿ ಸನದಲ್ಲಿ ಗದ್ದಲ ಸೃಷ್ಟಿಯಾಯಿತು.

ಸಭಾಪತಿ ರೂಲಿಂಗ್ ನೀಡಿದರೂ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿ ನಿಲ್ಲಲಿಲ್ಲ. ಸಚಿವರು, ಸದಸ್ಯರನ್ನು ನಿಯಂತ್ರಿಸಲು ಸಭಾಪತಿ ಹೊರಟ್ಟಿ ಸಾಕಷ್ಟು ಪ್ರಯತ್ನ ನಡೆಸಿದರೂ ಸದನ ಸಹಜ ಸ್ಥಿತಿಗೆ ಬರಲಿಲ್ಲ. ಗದ್ದಲ ಹೆಚ್ಚಾಯಿತು ಕಲಾಪ ನಡೆಸುವ ಸ್ಥಿತಿ ಇಲ್ಲದ ಕಾರಣ ವಿಧಾನ ಪರಿಷತ್ ಕಲಾಪವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com