ಬೆಂಗಳೂರಿನಲ್ಲಿ ಪ್ರತಿದಿನ 500 ಹೊಸ ನಾಲ್ಕು ಚಕ್ರದ ವಾಹನ, 1,300 ದ್ವಿಚಕ್ರ ವಾಹನ ರಸ್ತೆಗಿಳಿಯುತ್ತಿವೆ: ಡಿಕೆಶಿ

ಬೆಂಗಳೂರಿನಲ್ಲಿ ಪ್ರತಿದಿನ 1,300 ದ್ವಿಚಕ್ರ ವಾಹನಗಳು ಮತ್ತು ಸುಮಾರು 490 ನಾಲ್ಕು ಚಕ್ರದ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿದ್ದು, ನಗರ ಜೀವನದ ಗುಣಮಟ್ಟ ಖಚಿತಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಉಪಮುಖ್ಯಮಂತ್ರಿ...
ಬೆಂಗಳೂರು ಟ್ರಾಫಿಕ್
ಬೆಂಗಳೂರು ಟ್ರಾಫಿಕ್

ಬೆಳಗಾವಿ: ಬೆಂಗಳೂರಿನಲ್ಲಿ ಪ್ರತಿದಿನ 1,300 ದ್ವಿಚಕ್ರ ವಾಹನಗಳು ಮತ್ತು ಸುಮಾರು 490 ನಾಲ್ಕು ಚಕ್ರದ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿದ್ದು, ನಗರ ಜೀವನದ ಗುಣಮಟ್ಟ ಖಚಿತಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ರಾಜಧಾನಿಯಲ್ಲಿ ಸುಗಮ ಸಂಚಾರ ಮತ್ತು ನಗರವನ್ನು ಸುರಕ್ಷಿತಗೊಳಿಸುವ ಕುರಿತು ಬಿಜೆಪಿ ಎಂಎಲ್ ಸಿಗಳಾದ ಭಾರತಿ ಶೆಟ್ಟಿ ಮತ್ತು ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ನಗರದಲ್ಲಿ 1.30 ಕೋಟಿ ಜನರಿದ್ದರೆ, ವಾಹನಗಳ ಸಂಖ್ಯೆ ಸುಮಾರು 1.16 ಕೋಟಿ ಇದೆ ಎಂದು ಹೇಳಿದರು.

ನಗರದಲ್ಲಿ ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ನೀರು, ಸಂಚಾರ ದಟ್ಟಣೆ ಮತ್ತು ಹಸಿರಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖ ಸವಾಲಾಗಿದೆ. ಈ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.

ಈ ನಿರ್ಣಾಯಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂದು ಈಗಾಗಲೇ ಜನರಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಈಗಾಗಲೇ ರಾಜ್ಯದ ಜನರಿಂದ ಮತ್ತು ವಿದೇಶದಲ್ಲಿ ನೆಲೆಸಿರುವವರಿಂದ 70,000 ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ. ಅಲ್ಲದೆ ತಜ್ಞರಿಂದಲೂ ನಾವು ಸಲಹೆಗಳನ್ನು ಪಡೆದಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ಈ ವೇಳೆ ಹಾಜರಿದ್ದ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಜನರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಮತ್ತು ಅಪರಾಧಿಗಳ ಮೇಲೆ ನಿಗಾ ವಹಿಸುವ ಸಂಬಂಧ ಸರ್ಕಾರ ಈಗಾಗಲೇ ನಗರದಲ್ಲಿ ಸುಮಾರು 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದರು.

ಮುಂದಿನ ದಿನಗಳಲ್ಲಿ ನಗರದಲ್ಲಿ ನಿರ್ಭಯಾ ಯೋಜನೆಯಡಿ ಸುಮಾರು 2,500 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಸಾರ್ವಜನಿಕ ದಟ್ಟಣೆ ಹೆಚ್ಚಿರುವ ಶಿಕ್ಷಣ ಸಂಸ್ಥೆಗಳು, ಮಾಲ್‌ಗಳಂತಹ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com