ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ: ಬಿಆರ್‌ಎಸ್ ಪಕ್ಷದ ಐಟಿ ಸೆಲ್ ಉದ್ಯೋಗಿ ಬಂಧನ
ಬೆಂಗಳೂರು: ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡಿದ ಆರೋಪದ ಮೇಲೆ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಪಕ್ಷದ ಐಟಿ ಸೆಲ್ ಉದ್ಯೋಗಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ರವಿಕಾಂತಿ ಶರ್ಮಾ ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಇಂಧನ ಸಚಿವ ಕೆಜೆ ಜಾರ್ಜ್ ಅವರ ವಿರುದ್ಧ ಟ್ವೀಟರ್ ನಲ್ಲಿ ನಕಲಿ ಆಡಿಯೋ ತುಣುಕು ಪ್ರಸಾರ ಮಾಡಿದ್ದರು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ಬಿಆರ್‌ಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಪಕ್ಷದ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರ ತಂದೆ ಮತ್ತು ತಾಯಿ ಕೂಡ ಬಿಆರ್‌ಎಸ್ ಪಕ್ಷದ ಮಾಜಿ ಕಾರ್ಪೊರೇಟರ್‌ಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ಆರೋಪಿಯು ‘ಎಕ್ಸ್’ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ತುಣುಕು ಪ್ರಸಾರ ಮಾಡಿದ್ದ. ಈ ಸಂಬಂಧ ಪೂರ್ವ ವಿಭಾಗ ಸಿಇಎನ್ ಠಾಣೆಗೆ ನ.28ರಂದು ಬೆಸ್ಕಾಂ ಜನರಲ್ ಮ್ಯಾನೇಜರ್ ದೂರು ಸಲ್ಲಿಸಿದ್ದರು. ಇನ್‌ಸ್ಪೆಕ್ಟರ್ ಎಸ್.ಎಂ. ಉಮೇಶ್‌ಕುಮಾರ್ ನೇತೃತ್ವದ ತಂಡವು, ‘ಎಕ್ಸ್’ ಖಾತೆಗೆ ನೋಂದಣಿ ಆಗಿದ್ದ ಮೊಬೈಲ್ ಸಂಖ್ಯೆ ಜಾಡು ಹಿಡಿದಾಗ ರವಿಕಾಂತಿ ಶರ್ಮಾ ತಂದೆಯ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.
ಈ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ