ಬಲಿಷ್ಠ ಬಿಆರ್ ಎಸ್, ಮಹತ್ವಾಕಾಂಕ್ಷಿ ಬಿಜೆಪಿ ಎದುರು ಅದಮ್ಯ ಹೋರಾಟ: ತೆಲಂಗಾಣದ ಕಾಂಗ್ರೆಸ್ ಹೀರೋ ರೇವಂತ್ ರೆಡ್ಡಿ!

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಪ್ರಚಲಿತದಲ್ಲಿ ದೇಶದ ರಾಜಕೀಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು. ತೆಲಂಗಾಣ ರಾಜ್ಯದ 2ನೇ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ರೇವಂತ್ ರೆಡ್ಡಿ
ರೇವಂತ್ ರೆಡ್ಡಿ

ಹೈದರಾಬಾದ್ : ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಪ್ರಚಲಿತದಲ್ಲಿ ದೇಶದ ರಾಜಕೀಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು. ತೆಲಂಗಾಣ ರಾಜ್ಯದ 2ನೇ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕರಿಸುತ್ತಿದ್ದಾರೆ.

ಈ ಹಿಂದೆ ಎರಡು ಬಾರಿ ತೆಲಂಗಾಣ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಭಾರತ್ ರಾಷ್ಟ್ರ ಸಮಿತಿ(BRS) ಮತ್ತು ದಕ್ಷಿಣ ಭಾರತದಲ್ಲಿ ಈ ಬಾರಿಯಾದರೂ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಬಯಸುತ್ತಿದ್ದ ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಬಲಿಷ್ಠವಾಗಿರುವ ಬಿಜೆಪಿ ಎರಡಕ್ಕೂ ಸವಾಲೆಸೆಯುವ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದ ಕೀರ್ತಿ ರೆಡ್ಡಿ ಅವರಿಗೆ ಸಲ್ಲುತ್ತದೆ.

ರಾಜಕೀಯ ಜೀವನ: ರೇವಂತ್ ರೆಡ್ಡಿ ಮೂಲತಃ ಕಾಂಗ್ರೆಸ್ಸಿಗರಲ್ಲ, ಬದಲಾಗಿ ಬಲಪಂಥೀಯ ಎಬಿವಿಪಿಯಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ಬಂದವರು ಎಂಬುದು ಇಲ್ಲಿ ಆಸಕ್ತಿಕರ ವಿಷಯ. ಎಬಿವಿಪಿ ಸಂಘಟನೆಯಿಂದ ಪ್ರಾರಂಭವಾದ ಅವರ ಸಾರ್ವಜನಿಕ ಜೀವನದಲ್ಲಿ ಅವರ ವೃತ್ತಿಜೀವನ ಕುತೂಹಲಕಾರಿಯಾಗಿದೆ. ಈ ಮಧ್ಯೆ ಲಂಚದ ಆರೋಪದಲ್ಲಿ ಕೆಲ ಸಮಯ ಸೆರೆವಾಸವನ್ನು ಕೂಡ ಅನುಭವಿಸಿದ್ದರು. 

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ವಿರುದ್ಧದ ಹೋರಾಟದಲ್ಲಿ ಅವರು ಪಿಸಿಸಿ ಅಧ್ಯಕ್ಷರಾಗಿ ಆರಂಭದಿಂದಲೂ ಉತ್ಸಾಹದಿಂದಲೇ ತೊಡಗಿಸಿಕೊಂಡಿದ್ದರು. 56 ವರ್ಷ ವಯಸ್ಸಿನ ಕಾಂಗ್ರೆಸ್ ನಾಯಕ ರೆಡ್ಡಿ ಅವರು ಸಹ ರಾಜಕಾರಣಿಗಳು, ಪಕ್ಷದ ಸದಸ್ಯರು ಮತ್ತು ಸಾರ್ವಜನಿಕ ಜೀವನದಲ್ಲಿ ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಕೊನೆಯ ಕ್ಷಣದವರೆಗೂ ಕೆಚ್ಚೆದೆಯಿಂದ ಹೋರಾಡಬೇಕೆಂದು ತೋರಿಸಿಕೊಟ್ಟವರು. 

ಚಂದ್ರಶೇಖರ್ ರಾವ್ ಅವರ ಕಟು ಟೀಕಾಕಾರರಾಗಿದ್ದ ರೆಡ್ಡಿ ಅವರು ಬಿಆರ್‌ಎಸ್ ಮತ್ತು ಎಐಎಂಐಎಂನಿಂದ ತೀವ್ರ ರಾಜಕೀಯ ದಾಳಿಗೆ ಗುರಿಯಾಗಿದ್ದರು. 2015 ರಲ್ಲಿ ಅವರನ್ನು 'ಮತಕ್ಕಾಗಿ ನಗದು' ಪ್ರಕರಣದಲ್ಲಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ "ಏಜೆಂಟ್" ಎಂದು ಆರೋಪಿಸಿ ಬಂಧಿಸಲಾಗಿತ್ತು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ರೆಡ್ಡಿ ಅವರ ಎಬಿವಿಪಿ ಹಿನ್ನೆಲೆಯನ್ನು ಗುರಿಯಾಗಿಟ್ಟುಕೊಂಡು ಟೀಕಿಸಿದ್ದರು. 

ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಎಬಿವಿಪಿ ಹಿನ್ನೆಲೆಯಿಂದ ಅವರನ್ನು ಗುರಿಯಾಗಿಸಿದ್ದಾರೆ. ಈ ಹಿಂದೆ ಟಿಆರ್ ಎಸ್ ಆಗಿದ್ದ ಬಿಆರ್ ಎಸ್ ಪಕ್ಷದ ಜೊತೆ ರೇವಂತ ರೆಡ್ಡಿ ಕೆಲ ಸಮಯ ಇದ್ದರು. ಅವರು 2006 ರಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಗೆದ್ದು ರಾಜಕೀಯ ಜೀವನಕ್ಕೆ ಕಾಲಿಟ್ಟರು. ಜಿಲ್ಲಾ ಪರಿಷತ್ತಿನ ಪ್ರಾದೇಶಿಕ ಕ್ಷೇತ್ರ (ZPTC) ಸದಸ್ಯರಾಗಿ ನಂತರ ಸ್ವತಂತ್ರರಾಗಿ ಆಯ್ಕೆಯಾದರು.

ಹುಟ್ಟು ಬೆಳವಣಿಗೆ: ನವೆಂಬರ್ 8, 1969 ರಂದು ನಾಗರ್ಕರ್ನೂಲ್ ಜಿಲ್ಲೆಯ ಕೊಂಡರೆಡ್ಡಿಪಲ್ಲಿ ಗ್ರಾಮದಲ್ಲಿ ಜನಿಸಿದ ರೇವಂತ್ ರೆಡ್ಡಿ ಅವರು 2007 ರಲ್ಲಿ ಸ್ವತಂತ್ರವಾಗಿ ಅವಿಭಜಿತ ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ನಂತರ ಟಿಡಿಪಿಗೆ ಸೇರಿದರು ಮತ್ತು ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಆಪ್ತರಾದರು.

ಕಲಾ ಪದವೀಧರರಾದ ರೆಡ್ಡಿ ಅವರು 2009 ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ವಿಧಾನಸಭೆಗೆ ಆಯ್ಕೆಯಾದರು. ನಂತರ 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯಾದಾಗ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. 

ರಾಜಕೀಯ ಸವಾಲು: 2015 ರಲ್ಲಿ ಅವರು ತಮ್ಮ ರಾಜಕೀಯ ಜೀವನದ ದೊಡ್ಡ ಸವಾಲನ್ನು ಎದುರಿಸಿದರು, ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಡಿಪಿ ಪರವಾಗಿ ಮತ ಚಲಾಯಿಸಲು ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದರು ಎಂದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅವರನ್ನು ಹೈದರಾಬಾದ್‌ನ ಜೈಲಿಗೆ ಕಳುಹಿಸಲಾಗಿತ್ತು, ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. ಅಕ್ಟೋಬರ್ 2017 ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದರು. 

ರೇವಂತ್ ರೆಡ್ಡಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿಯ ವಿರುದ್ಧ ಸೋತು ರಾಜಕೀಯವಾಗಿ ಸ್ವಲ್ಪ ಸಮಯ ಹಿಂದುಳಿದಿದ್ದರು. ನಂತರ  2019 ರ ಚುನಾವಣೆಯಲ್ಲಿ ಮಲ್ಕಾಜ್‌ಗಿರಿಯಿಂದ ಲೋಕಸಭೆಗೆ ಆಯ್ಕೆಯಾದರು, ಈ ಕ್ಷೇತ್ರದಲ್ಲಿ ದೇಶದಾದ್ಯಂತದ ಜನರು ಇರುವುದರಿಂದ ಇದನ್ನು 'ಮಿನಿ-ಇಂಡಿಯಾ' ಎಂದು ಕರೆಯಲಾಗುತ್ತದೆ. 

ಕಾಂಗ್ರೆಸ್‌ನಲ್ಲಿ ಹೊಸಬರಾಗಿದ್ದರೂ ಅವರನ್ನು 2021 ರಲ್ಲಿ ಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ಇದು ರಾಜ್ಯ ಕಾಂಗ್ರೆಸ್ ಘಟಕದ ಅನೇಕ ಹಿರಿಯರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಕಾಂಗ್ರೆಸ್‌ನ ಅದೃಷ್ಟವನ್ನು ಪುನರುಜ್ಜೀವನಗೊಳಿಸುವ ಸವಾಲಿನ ಕೆಲಸವನ್ನು ಅವರು ಹೊಂದಿದ್ದರು. ಈ ಎಲ್ಲಾ ಸವಾಲುಗಳ ಮಧ್ಯೆ ಪಕ್ಷದ ನಾಯಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು.

2018 ರ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಮತ್ತು 2019 ರಲ್ಲಿ 12 ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷಕ್ಕೆ ಸೇರಿದ ನಂತರ ಆಡಳಿತಾರೂಢ ಬಿಆರ್ ಎಸ್ ತನ್ನ ಶಕ್ತಿ ಮತ್ತು ವೈಭವದ ಉತ್ತುಂಗದಲ್ಲಿತ್ತು. ತೆಲಂಗಾಣದಲ್ಲಿ ಬಂಡಿ ಸಂಜಯ್ ಕುಮಾರ್ ಅವರು ಬಿಜೆಪಿಯ ನಾಯಕತ್ವವನ್ನು ವಹಿಸಿಕೊಂಡ ನಂತರ 2020 ಮತ್ತು 2021 ರ ಅವಧಿಯಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್ ಹಿನ್ನಡೆಯನ್ನು ಎದುರಿಸುತ್ತಲೇ ಇತ್ತು.

ಇಂತಹ ಪರಿಸ್ಥಿತಿಯಲ್ಲಿ ರೇವಂತ್ ರೆಡ್ಡಿ ಅವರು ಅಸಾಧಾರಣ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಮುನ್ನಡೆಸುವುದನ್ನು ಮುಂದುವರೆಸಿದರು. ಈ ವರ್ಷದ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಅದೃಷ್ಟದಲ್ಲಿ ಬದಲಾವಣೆಯನ್ನು ಕಂಡಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೊರತಾಗಿ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಮಾಡಿದ ಏಕೈಕ ರಾಜ್ಯ ಕಾಂಗ್ರೆಸ್ ನಾಯಕ ಎಂದರೆ ರೇವಂತ್ ರೆಡ್ಡಿ. 
ರಾಹುಲ್ ಗಾಂಧಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಫುಟ್ಬಾಲ್ ಗೇಮ್ ರೀತಿಯ ಉತ್ಸಾಹಿ ರೇವಂತ್ ರೆಡ್ಡಿಯ ನಾಯಕತ್ವ ಅಡಿಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ನಾಳೆ ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದ್ದಾರೆ. 

ಜೂನ್ 2, 2014 ರಿಂದ ಡಿಸೆಂಬರ್ 3, 2023 ರವರೆಗೆ ಅಧಿಕಾರದಲ್ಲಿದ್ದ ಕೆಸಿಆರ್ ನಂತರ ರೆಡ್ಡಿ ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ನೀಡಿದ ಆರು ಚುನಾವಣಾ ಭರವಸೆಗಳನ್ನು ಜಾರಿಗೆ ತರಲು, ಚಾಣಾಕ್ಷ ಕೆಸಿಆರ್ ನೇತೃತ್ವದ ಪ್ರಬಲ ವಿರೋಧವನ್ನು ಎದುರಿಸಬೇಕಾಗಿರುವುದರಿಂದ ಮತ್ತು ಪಕ್ಷವು ಅಧಿಕಾರದಲ್ಲಿರುವಾಗಲೇ ಮಾನ್ಯತೆ ಬಯಸುತ್ತಿರುವ ತಮ್ಮದೇ ಪಕ್ಷದ ನಾಯಕರನ್ನು ನಿರ್ವಹಿಸಬೇಕಾಗಿರುವುದರಿಂದ ರೇವಂತ್ ರೆಡ್ಡಿ ಅವರ ಅಧಿಕಾರಾವಧಿಯು ಮುಂದಿನ ದಿನಗಳಲ್ಲಿ ಸವಾಲಿನದ್ದಾಗಿರಬಹುದು.

ನಿನ್ನೆ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಹೊಸ ಸಿಎಲ್‌ಪಿ ನಾಯಕರಾಗಿ ರೇವಂತ್ ರೆಡ್ಡಿ ಅವರನ್ನು ನೇಮಿಸುವ ಮೊದಲು, ಪಿಸಿಸಿ ಮಾಜಿ ಅಧ್ಯಕ್ಷ ಮತ್ತು ಶಾಸಕ ಎನ್ ಉತ್ತಮ್ ಕುಮಾರ್ ರೆಡ್ಡಿ ಅವರು ತಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದು ದೆಹಲಿಯಲ್ಲಿ ರಾಷ್ಟ್ರ ನಾಯಕರ ಮುಂದೆ ತೋರಿಸಿಕೊಂಡಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com