ಸದನದಲ್ಲಿ ಮರಾಠಿ ಮಾತನಾಡಿದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್: ಕನ್ನಡದ ಪಾಠ ಮಾಡಿದ ಸ್ಪೀಕರ್‌ ಖಾದರ್

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಅವರು ಮರಾಠಿ ಭಾಷೆಯಲ್ಲಿ ಮಾತನಾಡಿದ್ದು, ಇದು ಶುಕ್ರವಾರ ಸದನದಲ್ಲಿ ಕೆಲಕಾಲ ಗದ್ದಲ ಸೃಷ್ಟಿಸಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಅವರು ಮರಾಠಿ ಭಾಷೆಯಲ್ಲಿ ಮಾತನಾಡಿದ್ದು, ಇದು ಶುಕ್ರವಾರ ಸದನದಲ್ಲಿ ಕೆಲಕಾಲ ಗದ್ದಲ ಸೃಷ್ಟಿಸಿತ್ತು.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ವಿಠ್ಠಲ ಹಲಗೇಕರ್, ಖಾನಾಪುರ ತಾಲೂಕಿನಲ್ಲಿರುವ ಅಂಗನವಾಡಿಗಳಿಗೆ ಮರಾಠಿ ಭಾಷಿಕ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮರಾಠಿಯಲ್ಲಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ, ‘ಯಾವ ಭಾಷೆಯ ಕುರಿತು ಇಲ್ಲಿ ಗಲಾಟೆಗಳು ನಡೆಯುತ್ತಿವೆಯೋ, ನೀವು ಅದೇ ಭಾಷೆಯನ್ನು ವಿಧಾನಸಭೆಯಲ್ಲಿ ಬಳಸಲು ಅವಕಾಶ ನೀಡಬೇಡಿ’ ಎಂದರು.

‘ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ನಮ್ಮ ಬಳಿ ಕನ್ನಡದಲ್ಲೆ ಅವರು ಮಾತನಾಡುತ್ತಾರೆ. ಕನ್ನಡ ಮಾತನಾಡಲು ಸಾಧ್ಯವಾಗದಿದ್ದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲಿ ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್ ಅವರು, ನಿಮಗೆ ಬರುವ ಭಾಷೆಯಲ್ಲಿ ಮಾತನಾಡಿ ಎಂದು ಹೇಳಿದರು.

ಬಳಿಕ ಹಲಗೇಕರ್ ಅವರು, ಅರ್ಧ ಕನ್ನಡ ಅರ್ಧ ಮರಾಠಿಯಲ್ಲಿ ಮಾತನಾಡಲಾರಂಭಿಸುತ್ತಾರೆ. ಆಗ ಶಾಸಕ ಲಕ್ಷ್ಮಣ ಸವದಿ ಅವರು ಆಕ್ಷೇಪ ವ್ಯಕ್ತಪಡಿಸಿ, ಅವರಿಗೆ ಕನ್ನಡ ಮಾತನಾಡಲು ಬರುತ್ತದೆ. ನನ್ನೊಂದಿಗೆ ಕನ್ನಡದಲ್ಲೇ ಮಾತನಾಡುತ್ತಾರೆ ಎಂದರು. ಆಗ ಸ್ಪೀಕರ್ ಮಧ್ಯಪ್ರವೇಶಿಸಿ ಅವರಿಗೆ ಸರಿಯೆನಿಸುವ ಭಾಷೆಯಲ್ಲಿ ಮಾತಾಡಲಿ ಬಿಡಿ, ನೀವು ಹಿರಿಯ ಶಾಸಕರಾಗಿ ಹೀಗೆ ಅಡ್ಡಿ ಪಡಿಸಬಾರದು ಎಂದರು.

ಕನ್ನಡ ಭಾಷೆ ಬೆಳೆಯಬೇಕಾದರೆ, ಬೇರೆ ಭಾಷೆಯನ್ನು ದ್ವೇಷಿಸಬೇಡಿ, ಭಾಷೆಯಲ್ಲಿ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದರು.

ಆಗ ವಿಠಲ್ ಅವರು ಸವದಿ ಅವರು ನನ್ನ ಜೊತೆ ಮರಾಠಿಯಲ್ಲೇ ಮಾತನಾಡುತ್ತಾರೆ ಎಂದರು. ಕೊನೆಗೆ ಕನ್ನಡದಲ್ಲೇ ಮಾತು ಮುಂದುವರಿಸಿದ ಶಾಸಕ ವಿಠಲ ಹಲಗೇಕರ್ ಸರಿಯಾಗಿ ಅರ್ಥವಾಗದ ರೀತಿ ವಿಷಯಮಂಡನೆ ಮಾಡಿದರು.

ಖಾನಾಪುರ ಕ್ಷೇತ್ರದಲ್ಲಿ ಕನ್ನಡ ಶಿಕ್ಷಕರನ್ನು ಹಾಕಬೇಕು. ಅಂಗನವಾಡಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ನಂತರ ಸ್ಪೀಕರ್ ಯು.ಟಿ.ಖಾದರ್ ಅವರು, ನೀವು ಮುಂದಿನ ಅಧಿವೇಶನದ ವೇಳೆಗೆ ಕನ್ನಡ ಕಲಿತು ಬಂದು ವಿಷಯವನ್ನು ಚೆನ್ನಾಗಿ ಮಾತನಾಡಿ ಎಂದು ಶಾಸಕರಿಗೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com