ಕೆ. ಶ್ರೀನಿವಾಸ್
ಕೆ. ಶ್ರೀನಿವಾಸ್

ಕೇಂದ್ರ ಚುನಾವಣಾ ಆಯೋಗದ ಆದೇಶ: ತುಮಕೂರು ಡಿಸಿ ಶ್ರೀನಿವಾಸ್ ನೇಮಕ ಹಿಂಪಡೆದ ರಾಜ್ಯ ಸರ್ಕಾರ!

ಭಾರತ ಚುನಾವಣಾ ಆಯೋಗದ (ಇಸಿಐ) ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಕೆ ಶ್ರೀನಿವಾಸ್ ಅವರ ನೇಮಕವನ್ನು ಹಿಂತೆಗೆದುಕೊಂಡಿದೆ.

ಬೆಂಗಳೂರು: ಭಾರತ ಚುನಾವಣಾ ಆಯೋಗದ (ಇಸಿಐ) ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಕೆ ಶ್ರೀನಿವಾಸ್ ಅವರ ನೇಮಕವನ್ನು ಹಿಂತೆಗೆದುಕೊಂಡಿದೆ.

2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ದತ್ತಾಂಶ ಕಳ್ಳತನದ ಹಗರಣ ಬೆಳಕಿಗೆ ಬಂದಾಗ ಶ್ರೀನಿವಾಸ್ ಬೆಂಗಳೂರು ನಗರ ಉಪ ಆಯುಕ್ತರಾಗಿದ್ದರು. ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಅವರು 2024 ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದೆರಡು ವಾರಗಳ ಹಿಂದೆ ಪತ್ರ ಬರೆದಿದ್ದರು.

ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ 2014ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ ಶುಭಾ ಕಲ್ಯಾಣ್‌ ಅವರನ್ನು ತುಮಕೂರು ಡಿಸಿಯನ್ನಾಗಿ ಸರ್ಕಾರ ನೇಮಿಸಿದ್ದು,ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಶ್ರೀನಿವಾಸ್ ಅವರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಲಾಗಿದೆ.

ನವೆಂಬರ್ 2022 ರಲ್ಲಿ, ಮತದಾರರ ಡೇಟಾ ಕಳ್ಳತನದ ಹಗರಣವನ್ನು  ಭಾರತೀಯ ಚುನಾವಣಾ ಆಯೋಗ  ಗಮನಿಸಿತು. ಬಿಬಿಎಂಪಿ (ಕೇಂದ್ರ) ಹಾಗೂ ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯಾಗಿದ್ದ ಅಂದಿನ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಎಡಿಇಒ) ಎಸ್.ರಂಗಪ್ಪ ಹಾಗೂ ಮಹದೇವಪುರ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಶ್ರೀನಿವಾಸ್ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಲ್ಲದೆ, ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯ ಅಳಿಸುವಿಕೆ ಮತ್ತು ಸೇರ್ಪಡೆಯ ಲೆಕ್ಕಪರಿಶೋಧನೆಗೂ ಆದೇಶಿಸಿದೆ. ಹಗರಣದಲ್ಲಿ ಭಾಗಿಯಾಗಿದ್ದ ಹಲವು ಕಂದಾಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ನಂತರ, ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಶ್ರೀನಿವಾಸ್ ಮತ್ತು ರಂಗಪ್ಪ ಅವರನ್ನು ಅಮಾನತುಗೊಳಿಸಿತು, ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಭರವಸೆ ನೀಡಿತು.

ಆರೋಪಿ ಅಧಿಕಾರಿಗಳು ಚಿಲುಮೆ ಎನ್‌ಜಿಒ ಎಜುಕೇಶನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್   ಟ್ರಸ್ಟ್‌ನೊಂದಿಗೆ  ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ, ಇದರ ಏಜೆಂಟ್‌ಗಳು ಬಿಬಿಎಂಪಿ ಅಧಿಕಾರಿಗಳಂತೆ ಪೋಸ್ ನೀಡಿದ್ದರು ಮತ್ತು ಜಾತಿ, ಶಿಕ್ಷಣ, ಮಾತೃಭಾಷೆ ಆಧಾರದ ಮೇಲೆ, ಆಧಾರ್ ಸಂಖ್ಯೆ ವಿವರಗಳನ್ನು ಒಳಗೊಂಡಂತೆ ಮತದಾರರ ಡೇಟಾವನ್ನು ಸಂಗ್ರಹಿಸಿದ್ದರು. SVEEP (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲೆಕ್ಟೋರಲ್ ಪಾರ್ಟಿಸಿಪೇಶನ್) ಚಟುವಟಿಕೆಯ ನೆಪದಲ್ಲಿ ಈ ಕೆಲಸವನ್ನು ಕೈಗೊಳ್ಳಲು ಬಿಬಿಎಂಪಿ ಚಿಲುಮೆ ಎನ್‌ಜಿಒಗೆ ವಹಿಸಿತ್ತು.

ಮತದಾರರ ದತ್ತಾಂಶ ಸಂಗ್ರಹಿಸಲು ಮತ್ತು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲು ಎನ್‌ಜಿಒಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪಟ್ಟಿಗೆ ಸುಮಾರು 2.7 ಮಿಲಿಯನ್ ಹೆಸರುಗಳನ್ನು ಅಳಿಸಲಾಗಿದೆ ಮತ್ತು 1.1 ಮಿಲಿಯನ್ ಮತದಾರರನ್ನು ಸೇರಿಸಲಾಗಿದೆ. ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಸೋಗು ಹಾಕಿ ನಕಲಿ ಗುರುತಿನ ಚೀಟಿ ನೀಡಿದ ಖಾಸಗಿ ವ್ಯಕ್ತಿಗಳನ್ನು ಎನ್‌ಜಿಒ ನೇಮಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಆದರೆ ಡಿಸೆಂಬರ್ 2022 ರಲ್ಲಿ, ಸರ್ಕಾರವು ಶ್ರೀನಿವಾಸ್ ಮತ್ತು ರಂಗಪ್ಪ ಅವರ ಅಮಾನತನ್ನು ಹಿಂತೆಗೆದುಕೊಂಡಿತು ಮತ್ತು ಅವರನ್ನು ಕ್ರಮವಾಗಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿತು. ನಂತರ, ಶ್ರೀನಿವಾಸ್ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಮೇ 2023 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜೂನ್‌ನಲ್ಲಿ ಶ್ರೀನಿವಾಸ್ ಅವರನ್ನು ತುಮಕೂರು ಡಿಸಿಯಾಗಿ ವರ್ಗಾವಣೆ ಮಾಡಿತ್ತು.

Related Stories

No stories found.

Advertisement

X
Kannada Prabha
www.kannadaprabha.com