ನಾನೇನು ದನಾ ಕಾಯೋಕೆ ಇದೀನಾ: ಹಾಸನ ಡಿಸಿ ವಿರುದ್ಧ ಸ್ವರೂಪ್ ಪ್ರಕಾಶ್ ಕಿಡಿ

ಹಾಸನಾಂಬೆ ದೇಗುಲದ ಕಳಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಶಾಸಕ ಸ್ವರೂಪ್‌ ಪ್ರಕಾಶ್ ಜಿಲ್ಲಾಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ
ಸ್ವರೂಪ್ ಪ್ರಕಾಶ್
ಸ್ವರೂಪ್ ಪ್ರಕಾಶ್

ಹಾಸನ: ಹಾಸನಾಂಬೆ ದೇಗುಲದ ಕಳಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಶಾಸಕ ಸ್ವರೂಪ್‌ ಪ್ರಕಾಶ್ ಜಿಲ್ಲಾಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಮುಂಜಾನೆ ಹಾಸನಾಂಬ ದೇವಾಲಯದ ಕಳಶ ಪ್ರತಿಷ್ಠಾಪನೆ ನೆರವೇರಿಸಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿರುದ್ಧ ಕಿಡಿಕಾರಿದ್ದಾರೆ.

ಹಾಸನಾಂಬೆಯ ಸಾರ್ವಜನಿಕ ದರ್ಶನೊತ್ಸವ ಇಂದಿನಿಂದ ಆರಂಭವಾಗಿದೆ. ನಿನ್ನೆ(ನವೆಂಬರ್ 03) ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಮೊದಲ ದಿನವೇ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು ಪತ್ನಿ ಚನ್ನಮ್ಮ ಹಾಗೂ ಪುತ್ರಿಯರ ಜೊತೆ ಶುಕ್ರವಾರ ಹಾಸನಾಂಬೆ ದರ್ಶನ ಪಡೆದರು.

ಇನ್ನು ಜಿಲ್ಲಾಡಳಿತದ ವ್ಯವಸ್ಥೆಗೆ ದೇವೇಗೌಡರು ಫಿದಾ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗು ಜಿಲ್ಲಾಡಳಿತದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ, ಇಂದು ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ದೇಗುಲಕ್ಕೆ ಕಳಶ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ಥಳೀಯ ಶಾಸಕನಾದ ನನ್ನನ್ನ ಯಾಕೆ ಕರೆದಿಲ್ಲ ನಾನೇನು ದನಾ ಕಾಯೋಕೆ ಇದೀನಾ ಎಂದು ಡಿಸಿಗೆ ಹಾಸನಾಂಬೆ ಆವರಣದಲ್ಲೇ ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಅಲ್ಲದೇ ಹೆಲಿಟೂರಿಸಂಗೆ ಚಾಲನೆ ನೀಡಿದ್ದೀರಿ. ಅದಕ್ಕೂ ನಮ್ಮನ್ನ ಕಡೆಗಣಿಸಿದ್ದೀರಿ. ನೀವು ನಿಮ್ಮ ಪತಿ ಕೂತುಕೊಂಡು ಹೇಗೆ ಹೋಮ ಮಾಡಿದ್ರಿ ಎಂದು ಪ್ರಶ್ನಿಸಿದರು.

ನನ್ನನ್ನು ಎರಡು ಲಕ್ಷ ಮಂದಿ ಆಯ್ಕೆ ಮಾಡಿದ್ದಾರೆ ಅವರಿಗೆ ನಾನು ಉತ್ತರ ಕೊಡಬೇಕು ಎಂದು ನುಡಿದ ಸ್ವರೂಪ್ ಪ್ರಕಾಶ್, ಎಷ್ಟೋ ಜನ ಡಿಸಿ ಬಂದಿದ್ದಾರೆ, ಹೋಗಿದ್ದಾರೆ. ನಿಮ್ಮನ್ನು ಏನು ಅಂದುಕೊಂಡಿದ್ದೀರಾ ನೀವು ಗಂಡ-ಹೆಂಡತಿ ಇಬ್ಬರೇ ಹೋಮ-ಹವನ ಮಾಡಿದ್ದೀರಾ. ನಿಮ್ಮ ಕುಟುಂಬದವರ ಪೂಜೆಗಾಗಿ ಹದಿನೈದು ನಿಮಿಷ ಬಾಗಿಲು ಹಾಕಿದ್ದೀರಾ ಎಂದು ಡಿಸಿ ದಂಪತಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು.

ದೇವಸ್ಥಾನವನ್ನು ನಿಮ್ಮ ಸ್ವಂತ ಆಸ್ತಿ ಮಾಡಿಕೊಂಡಿದ್ದೀರಾ, ನಗರಸಭೆ ಸದಸ್ಯರನ್ನು ಕಡೆಗಣಿಸಿದ್ದೀರಾ. ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದೀರಾ ಎಂದು ಹರಿಹಾಯ್ದ ಸ್ವರೂಪ್ ಪ್ರಕಾಶ್ ಸೂಕ್ತ ಉತ್ತರ ನೀಡದಿದ್ದರೆ ಇಲ್ಲೇ ಪ್ರತಿಭಟನೆಗೆ ಕೂರುತ್ತೇನೆ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com