ಹಾಸನ: ಪ್ರೀತಂಗೌಡ ಅತಿಯಾದ ಆತ್ಮವಿಶ್ವಾಸಕ್ಕೆ ಮುಖಭಂಗ: ಸ್ವರೂಪ್‌ ಜಯಭೇರಿ; ಮಾತು ಉಳಿಸಿಕೊಂಡ ಭವಾನಿ!

ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್  ಭರ್ಜರಿ ಗೆಲುವು‌ ಸಾಧಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ನಿಜವಾಗಿದೆ.
ಸ್ವರೂಪ್ ಪ್ರಕಾಶ್ ಮತ್ತು ಪ್ರೀತಂ ಜೆ ಗೌಡ
ಸ್ವರೂಪ್ ಪ್ರಕಾಶ್ ಮತ್ತು ಪ್ರೀತಂ ಜೆ ಗೌಡ

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್  ಭರ್ಜರಿ ಗೆಲುವು‌ ಸಾಧಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ನಿಜವಾಗಿದೆ.

ಮೂರು ಬಾರಿ ಶಾಸಕರಾಗಿದ್ದ ದಿವಂಗತ‌ ಎಚ್.ಎಸ್‌. ಪ್ರಕಾಶ್ ಅವರ ಪುತ್ರ ಸ್ವರೂಪ್ ಸುಮಾರು 8 ಸಾವಿರ ಮತಗಳಿಂದ ಗೆಲುವು‌ ಸಾಧಿಸಿದ್ದಾರೆ. ಅನುಕಂಪ, ಆಡಳಿತ‌ ವಿರೋಧಿ ಅಲೆ ಕ್ಷೇತ್ರದಲ್ಲಿ‌ ಕೆಲಸ ಮಾಡಿದೆ.

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ ನಿಲ್ಲುವ ಇಂಗಿತ ವ್ಯಕ್ತಪಡಿಸಿದರು. ಇದೇ ವಿಚಾರ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಕೊನೆ ಕ್ಷಣದಲ್ಲಿ ಭವಾನಿಗೆ ಟಿಕೆಟ್ ನಿರಾಕರಿಸಿ, ಸ್ವರೂಪ್ ಪ್ರಕಾಶ್​ಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದರು.

ರೇವಣ್ಣ ಕುಟುಂಬದ‌ ಯಾರೇ ಸ್ಪರ್ಧಿಸಿದರೂ, 50‌ ಸಾವಿರ‌ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ‌ ಸವಾಲು ಹಾಕಿದ್ದ ಪ್ರೀತಂ ಗೌಡ ಸೋಲು ಅನುಭವಿಸಬೇಕಾಗಿದೆ. ಅತಿಯಾದ ಆತ್ಮವಿಶ್ವಾಸ, ಅನಗತ್ಯ ಹೇಳಿಕೆಗಳಿಂದ ಗೊಂದಲ ಸೃಷ್ಟಿಸಿಕೊಂಡ ಪ್ರೀತಂ ಗೌಡ ಅವರನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ.

ದಾಸ ಒಕ್ಕಲಿಗ ಸಮುದಾಯದ ಮತಗಳು ಬಿಜೆಪಿ, ಜೆಡಿಎಸ್‌ಗೆ ಹಂಚಿಕೆಯಾಗಿದ್ದು, ಅಲ್ಪಸಂಖ್ಯಾತರ ಮತಗಳು ಸಂಪೂರ್ಣವಾಗಿ ಜೆಡಿಎಸ್ ಪರ ಬಂದಿದ್ದರಿಂದ ಸ್ವರೂಪ್ ಗೆಲುವು ಸುಲಭವಾಯಿತು.

ಸ್ವರೂಪ್ ಗೆ ಟಿಕೆಟ್ ಕೊಡಲು ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಚ್.ಡಿ.ರೇವಣ್ಣ ಕುಟುಂಬ ಸ್ವರೂಪ ಪರ ನಿಂತಿದ್ದು ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಭಾವನಾತ್ಮಕ ಪ್ರಚಾರಗಳು ಸ್ವರೂಪ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ಟಿಕೆಟ್ ನೀಡಿದ ಬೆನ್ನಲ್ಲೇ, ದೇವೇಗೌಡರು ಭವಾನಿ ಅವರನ್ನು ಮನೆಗೆ ಕರೆಸಿ ಟಾಸ್ಕ್ ನೀಡಿದ್ದರು. ಸ್ವರೂಪ್ ಪ್ರಕಾಶ್​ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನೀಡಿದ್ದರು. ದೇವೇಗೌಡರ ಮಾತಿನಂತೆ ಸ್ವರೂಪ್ ಪ್ರಕಾಶ್​ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಬಿಜೆಪಿಯಿಂದ ಪ್ರೀತಂಗೌಡ ಕಣಕ್ಕೆ ಇಳಿದಿದ್ದರೆ, ಕಾಂಗ್ರೆಸ್​ನಿಂದ ಬನವಾಸಿ ರಂಗಸ್ವಾಮಿ ಕಣದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com