ಬೆಳಗಾವಿ: ಪ್ರೇಮಿಗಳಿಬ್ಬರು ಮನೆ ಬಿಟ್ಟು ಪರಾರಿಯಾದ್ದರಿಂದ ಆಕ್ರೋಶಗೊಂಡ ಯುವತಿ ಕಡೆಯವರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂದೆ ಮೇಲೆ ಹಲ್ಲೆ ಮಾಡಿರುವ ಧಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹೌದು.. ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದ್ದು, ಪ್ರೇಮಿಗಳಿಬ್ಬರು ಪರಾರಿಯಾದ ಹಿನ್ನಲೆಯಲ್ಲಿ ಯುವತಿ ಕಡೆಯವರು ಯುವಕನ ತಂದೆಯನ್ನು ಥಳಿಸಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ತಂದೆಯನ್ನು ಅಮಾನವೀಯವಾಗಿ ಹಲ್ಲೆ ಮಾಡಿರುವ ದೃಶ್ಯ ಮಾಧ್ಯಮಗಳಿಗೆ ಲಭ್ಯವಾಗಿದೆ. ಯವತಿಯನ್ನು ತಮಗೆ ಒಪ್ಪಿಸುವಂತೆ ಆಗ್ರಹಿಸಿ ಮೂವರು ಮಹಿಳೆಯರು ಸೇರಿದಂತೆ 8 ಜನರಿಂದ ಯುವಕನ ತಂದೆ ಮೇಲೆ ಹಲ್ಲೆ ಮಾಡಿದ್ದು, ಒಂದು ವೇಳೆ ಯುವತಿ ಮನೆಗೆ ಬಾರದಿದ್ದರೆ ಕೊಂದು ಹಾಕುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಯುವಕನ ತಂದೆಗೆ ಜೀವ ಬೆದರಿಕೆಯೊಡ್ಡಿದ್ದು, ಮೊಬೈಲ್ ಕಸಿದುಕೊಂಡು ಹಲ್ಲೆ (Assault) ನಡೆಸಿದ್ದಾರೆ. ಅಲ್ಲದೇ ಅಪಹರಣಕ್ಕೆ ಯತ್ನಿಸಿರುವುದಾಗಿ ಯುವಕನ ತಂದೆ ಹೇಳಿದ್ದಾರೆ. ಘಟನೆಯ ಕುರಿತು ಯುವಕನ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವತ್ತರಾದ ಬೆಳಗಾವಿ ನಗರ ಪೊಲೀಸರು 8 ಜನರನ್ನು ಬಂಧಿಸಿ ಯುವಕನ ತಂದೆಗೆ ರಕ್ಷಣೆ ನೀಡಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.
Advertisement