ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಮುಖ್ಯ ಶಿಕ್ಷಕಿ ಅಮಾನತು

ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಕ್ಕಳಿಂದ ಶೌಚಾಲಯ ಕ್ಲೀನಿಂಗ್
ಮಕ್ಕಳಿಂದ ಶೌಚಾಲಯ ಕ್ಲೀನಿಂಗ್

ಬೆಂಗಳೂರು: ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಕೆಲವು ವಿದ್ಯಾರ್ಥಿಗಳು  ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ.

ಘಟನೆಯ ನಂತರ, ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿ, ಆವರಣದ ಹೊರಗೆ ಪ್ರತಿಭಟನೆ ನಡೆಸಿ, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೂಡಲೇ ಶಾಲೆಗೆ ಆಗಮಿಸಿದ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ಅಂಜನಪ್ಪ ಅವರು, ಪರಿಶೀಲನೆ ನಡೆಸಿ, ತಪ್ಪಿತಸ್ಥ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಈ ಬಗ್ಗೆ ವಿಚಾರಿಸಲು ಮಧ್ಯಾಹ್ನ 3 ಗಂಟೆಗೆ ಸಭೆ ಕರೆದಿದ್ದೇನೆ ಮತ್ತು ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಲೆಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ವ್ಯವಸ್ಥೆ ಇದೆ. ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳಬಾರದು, ಈ ಹಿಂದೆ ಎನ್‌ಎಸ್‌ಎಸ್, ಸೇವಾದಳ ಶಿಬಿರಗಳಲ್ಲಿ ಮಕ್ಕಳಿಗೆ ಉದ್ಯಾನ ಸ್ವಚ್ಛಗೊಳಿಸಲು, ಸಸಿ ನೆಡಲು ತರಬೇತಿ ನೀಡಲಾಗುತ್ತಿತ್ತು. ಆದರೆ ಶೌಚಾಲಯ ಸ್ವಚ್ಛಗೊಳಿಸಲು ನಾವು ಯಾರಿಗೂ ಅನುಮತಿ ನೀಡಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.

ಇನ್ನು ಘಟನೆ ವರದಿಯಾಗುತ್ತಿದ್ದಂತೆಯೇ ಅಂಧ್ರಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಸುಮಾರು 640 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಎಸ್‌ಸಿ-ಎಸ್‌ಟಿ ಸಮುದಾಯದ ಮಂದಿಯೇ ಇದ್ದಾರೆ. ಕೋಲಾರದ ಘಟನೆಯ ನಂತರವೂ ಕೂಡ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸರ್ಕಾರ ಈ ರೀತಿಯ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com