ಹಿಜಾಬ್ ಮೇಲಿನ ನಿಷೇಧ ಹಿಂಪಡೆಯುವ ಕುರಿತು ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ ಯೂಟರ್ನ್

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಮೈಸೂರು: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 'ನಾವು ಇನ್ನೂ ಅದನ್ನು (ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವುದು) ಮಾಡಿಲ್ಲ.  ಯಾರೋ ನನಗೆ (ಹಿಜಾಬ್ ನಿಷೇಧ ತೆಗೆದುಹಾಕುವ ಬಗ್ಗೆ) ಪ್ರಶ್ನೆಯನ್ನು ಕೇಳಿದರು. ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎಂದು ನಾನು ಉತ್ತರಿಸಿದೆ. ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು' ಎಂದು ಹೇಳಿದರು.

ಉಡುಪು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯ ವಿಷಯವಾಗಿದ್ದು, ರಾಜ್ಯದಲ್ಲಿ ಹಿಜಾಬ್ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಘೋಷಿಸಿದರು. 

'ಪ್ರಧಾನಿ ಮೋದಿಯವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವುದು ಬೋಗಸ್ ಆಗಿದೆ. ಬಿಜೆಪಿಯು ಜನರು ಮತ್ತು ಸಮಾಜವನ್ನು ಬಟ್ಟೆ, ಉಡುಗೆ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸುತ್ತಿದೆ' ಎಂದು ಸಿಎಂ ದೂರಿದ್ದರು.

ಹಿಜಾಬ್ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು 'ಯುವ ಮನಸ್ಸುಗಳನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುತ್ತಿದೆ' ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಸಿದ್ದರಾಮಯ್ಯ ಅವರು ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ.

'ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಲ್ಪಸಂಖ್ಯಾತರ ಸಾಕ್ಷರತೆ ಮತ್ತು ಉದ್ಯೋಗ ಪ್ರಮಾಣ ಇನ್ನೂ ಶೇ 50ರಷ್ಟಿದೆ. ಕಾಂಗ್ರೆಸ್ ಎಂದಿಗೂ ಅಲ್ಪಸಂಖ್ಯಾತರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಲಿಲ್ಲ' ಎಂದು ದೂರಿದರು.

'ಕಾಂಗ್ರೆಸ್ ಬ್ರಿಟಿಷರು ಅಳವಡಿಸಿಕೊಂಡಿದ್ದ ಒಡೆದು ಆಳುವ ನೀತಿಯನ್ನು ನಂಬುತ್ತದೆ. ಇದು ಬ್ರಿಟಿಷರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ' ಎಂದು ಅವರು ಹೇಳಿದರು.

2022 ರಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com