ಸಿಎಂ ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಕುಮಾರಸ್ವಾಮಿಗೆ ಸಮನ್ಸ್‌ ಜಾರಿ

ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ತನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ ಮತ್ತು ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆಸಲು ಉದ್ದೇಶಿಸಲಾಗಿದೆ ಎಂದು ಆಕ್ಷೇಪಿಸಿ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಅರ್ಜಿಯ ಸಂಬಂಧ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ತನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ ಮತ್ತು ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆಸಲು ಉದ್ದೇಶಿಸಲಾಗಿದೆ ಎಂದು ಆಕ್ಷೇಪಿಸಿ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಅರ್ಜಿಯ ಸಂಬಂಧ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡ ಮತ್ತು ರಾಜ್ಯ ಘಟಕದ ಹಂಗಾಮಿ ಅಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ನೋಟಿಸ್‌ ಮತ್ತು ಸಮನ್ಸ್‌ ಜಾರಿ ಮಾಡಿದೆ.

ಮೂಲ ದಾವೆ ಇತ್ಯರ್ಥವಾಗುವವರೆಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈಚೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಸಾವಿತ್ರಿ ಶಿವಪುತ್ರ ಕುಜ್ಜಿ ಅವರು ನಡೆಸಿದರು.

“16-11-2023ರಂದು ಜೆಡಿಎಸ್‌ ಹೊರಡಿಸಿರುವ ಆಕ್ಷೇಪಾರ್ಹವಾದ ಅಮಾನತು ಆದೇಶದಲ್ಲಿ ಸಿ ಎಂ ಇಬ್ರಾಹಿಂ ಅವರ ನಡತೆಯಿಂದ ಪಕ್ಷ, ದೇವೇಗೌಡ ಮತ್ತು ಕುಮಾರಸ್ವಾಮಿ ಅಸಮಾಧಾನಗೊಂಡಿದ್ದು, ಸಲ್ಲಿಕೆಯಾಗಿರುವ ದಾಖಲೆಯಲ್ಲಿ ಮೇಲ್ನೋಟಕ್ಕೆ ಇಬ್ರಾಹಿಂ ವಿರುದ್ಧ ಕೆಲವು ಆರೋಪಗಳು ಇರುವಂತಿದೆ. ಸದ್ಯದ ಪರಿಸ್ಥಿತಿ ಮತ್ತು ವಾಸ್ತವಿಕ ಅಂಶಗಳನ್ನು ಪರಿಗಣಿಸಿ, ಪ್ರತಿವಾದಿಗಳನ್ನು ಆಲಿಸದೇ ಏಕಪಕ್ಷೀಯ ನಿರ್ಬಂಧ ಆದೇಶ ಮಾಡಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಯಾವಾಗ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಇಬ್ರಾಹಿಂ ಅವರು ತಮ್ಮ ಅಫಿಡವಿಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ, ಇಬ್ರಾಹಿಂ ತಮ್ಮ ಹಕ್ಕಿಗೆ ಅಪಾಯ ಇದೆ ಎಂಬುದನ್ನು ತೋರಿಸದೇ ಇರುವಾಗ ಪ್ರತಿವಾದಿಗಳನ್ನು ಆಲಿಸದೇ ನಿರ್ಬಂಧಕ ಆದೇಶ ಮಾಡಲು ಆಧಾರ ಕಾಣದು” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಹೀಗಾಗಿ, ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಹಾಗೂ ಸಮನ್ಸ್‌ ಜಾರಿ ಮಾಡಿ, ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಅಂದರೆ 03-08-2022ರಂದು ಜೆಡಿಎಸ್‌ ಅಧ್ಯಕ್ಷರಾಗಿ ತನ್ನನ್ನು ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಸಕಾರಣವಿಲ್ಲದೇ ತಮ್ಮನ್ನು 16-11-2023ರಂದು ಪಕ್ಷದಿಂದ ಉಚ್ಚಾಟಿಸಿದ್ದಾರೆ ಎಂದು ಇಬ್ರಾಹಿಂ ಆಕ್ಷೇಪಿಸಿದ್ದಾರೆ.

ಪ್ರತಿವಾದಿಗಳ ಈ ನಡೆಯು ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪಕ್ಷದ ನಿಯಮಗಳನ್ನು ಪಾಲಿಸಲಾಗಿಲ್ಲ. ಈ ನೆಲೆಯಲ್ಲಿ ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಇಬ್ರಾಹಿಂ ಅರ್ಜಿಯಲ್ಲಿ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com