ಪ್ರಚೋದನಾಕಾರಿ‌ ಭಾಷಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್‌ ದಾಖಲು

ಮುಸ್ಲಿಂ ಮಹಿಳೆಯರ ಕುರಿತ ಹೇಳಿಕೆ ಮತ್ತು ಪ್ರಚೋದನಾಕಾರಿ‌ ಭಾಷಣ ಮಾಡಿದ ಆರೋಪದ ಮೇರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್
ಕಲ್ಲಡ್ಕ ಪ್ರಭಾಕರ್ ಭಟ್

ಮಂಡ್ಯ: ಮುಸ್ಲಿಂ ಮಹಿಳೆಯರ ಕುರಿತ ಹೇಳಿಕೆ ಮತ್ತು ಪ್ರಚೋದನಾಕಾರಿ‌ ಭಾಷಣ ಮಾಡಿದ ಆರೋಪದ ಮೇರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಭಾನುವಾರ ಹಿಂದೂ‌ ಜಾಗರಣಾ ವೇದಿಕೆಯು ಶ್ರೀರಂಗಪಟ್ಟಣ ಪಟ್ಟಣದಲ್ಲಿ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆ ವೇಳೆ ಪ್ರಚೋದನಾಕಾರಿ‌ ಭಾಷಣ ಮಾಡಿದ ಆರೋಪದ‌ ಮೇಲೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ‌ ಪ್ರಭಾಕರ ಭಟ್ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಮಹಿಳಾ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಎಂಬುವರು ದೂರು ನೀಡಿದ್ದು, ಅದನ್ನು ಆಧರಿಸಿ ಐಪಿಸಿ ಸೆಕ್ಷನ್ 294, 295, 298, 354, 506, 509 ಮತ್ತು 153 ಎ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

'ಮುಸ್ಲಿಂ ಮಹಿಳೆಯರ ಬಗ್ಗೆ ಪ್ರಭಾಕರ ಭಟ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಧರ್ಮಗಳ ನಡುವೆ ಗಲಭೆ, ಅಶಾಂತಿ ಸೃಷ್ಟಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನೂ ಅಣಕಿಸಿದ್ದಾರೆ. ಪ್ರಭಾಕರ ಭಟ್ ವಿರುದ್ಧ ಈ ಹಿಂದೆಯೂ ರಾಜ್ಯದ ಹಲವು ಠಾಣೆಗಳಲ್ಲೂ ಈ ರೀತಿಯ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಅವರ ವಿರುದ್ಧ ರೌಡಿಶೀಟ್ ತೆರೆಯಬೇಕು' ಎಂದು ನಜ್ಮಾ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಉಳ್ಳಾಲ ಠಾಣೆಯಲ್ಲಿ ದೂರು
ಅಂತೆಯೇ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ  ಉಳ್ಳಾಲ‌ದಲ್ಲೂ ದೂರು ದಾಖಲಾಗಿದ್ದು, ಉಳ್ಳಾಲ‌ ಪೌರ ಸಮನ್ವಯ ಸಮಿತಿ ಮಂಗಳವಾರ ಉಳ್ಳಾಲ‌ ಠಾಣೆಗೆ ದೂರು ನೀಡಿದೆ. ಈ ವೇಳೆ ಮಾತನಾಡಿದ ಉಳ್ಳಾಲ‌ ನಗರಸಭೆಯ ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಮಾತನಾಡಿ, ಪ್ರಭಾಕರ್ ಭಟ್ ಹೇಳಿಕೆ ಮುಸಲ್ಮಾನರು ಮಾತ್ರವಲ್ಲ, ಎಲ್ಲಾ ಧರ್ಮದವರಿಗೆ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಂತೆಯೇ ಹೆಣ್ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಆಗಲೇಬೇಕು. ಆದರೆ ಯಾವುದೇ ಸರಕಾರ ಬಂದರೂ ಅವರ ಬಂಧನ ಆಗುವುದು ಅನುಮಾನ ಎಂದು ಉಳ್ಳಾಲ‌ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು.

ವಿಎಚ್‌ಪಿ ಖಂಡನೆ
ಇನ್ನು ಕಲ್ಲಡ್ಕ ಪ್ರಭಾಕರ ಭಟ್‌ ಅವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ವಿಶ್ವಹಿಂದೂ ಪರಿಷತ್‌ ಖಂಡಿಸಿದೆ. ತ್ರಿವಳಿ ತಲಾಖ್‌ ನಿಷೇಧದ ಮೂಲಕ ಕೇಂದ್ರ ಸರಕಾರ ಮುಸ್ಲಿಂ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯ ಹಕ್ಕು ನೀಡಿರುವುದನ್ನು ಪ್ರಭಾಕರ ಭಟ್‌ ಅವರು ಭಾಷಣದಲ್ಲಿ ಉಲ್ಲೇಖೀಸಿದ್ದಾರೆ. ಇದಕ್ಕಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ. ಇದು ಸಂಘ ಮತ್ತು ಹಿಂದೂ ಸಂಘಟನೆಗಳನ್ನು ದಮನಿಸುವ ಸಂಚು. ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಸುಳ್ಳು ಕೇಸು ದಾಖಲಿಸಲಾಗಿದೆ. ಕೂಡಲೇ ಕೇಸು ವಾಪಸ್‌ ಪಡೆಯಬೇಕು ಎಂದು ವಿಶ್ವಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com