ಹಿನ್ನೋಟ 2023: ರಾಜ್ಯಾದ್ಯಂತ ಸದ್ದು ಮಾಡಿದ ವಿವಾದಾತ್ಮಕ ಹೇಳಿಕೆಗಳು!

ಪ್ರಮುಖವಾಗಿ ರಾಜಕೀಯ ನಾಯಕರು, ಸಿನಿಮಾ ನಟರು, ವಿವಾದದ ಸುಳಿಯಲ್ಲಿ ಸಿಕ್ಕು ಪರದಾಡಿದರು. ಅದರಲ್ಲಿ ನಟ ಉಪೇಂದ್ರ ಹೊಲಗೇರಿ ಹೇಳಿಕೆ, ಎಚ್‌ಡಿಕೆ ಬಿಜೆಪಿ ಬ್ರಾಹ್ಮಣ ಸಿಎಂ ಹೇಳಿಕೆ , ಭವಾನಿ ರೇವಣ್ಣ ಒಂದೂವರೆ ಕೋಟಿ ರು ಕಾರು ವಿವಾದ​​ ಸೇರಿ ಹಲವು ವಿಷಯಗಳುಳು ಸದ್ದು ಮಾಡಿದ್ದವು.
2023ರ ವಿವಾದಾತ್ಮಕ ಸುದ್ದಿಗಳು
2023ರ ವಿವಾದಾತ್ಮಕ ಸುದ್ದಿಗಳು

ಬೆಂಗಳೂರು: 2023 ನೇ ವರ್ಷವು ರಾಜ್ಯದ ಪಾಲಿಗೆ ಸಾಕಷ್ಟು ಮಹತ್ವದಾಗಿತ್ತು. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಮುಖ ವಿದ್ಯಮಾನಗಳು ಜರುಗಿದವು. ಅಂತೆಯೇ ಹಲವು ವಿವಾದಗಳು ಸದ್ದು ಮಾಡಿದ್ದವು. ಪ್ರಮುಖವಾಗಿ ರಾಜಕೀಯ ನಾಯಕರು, ಸಿನಿಮಾ ನಟರು, ವಿವಾದದ ಸುಳಿಯಲ್ಲಿ ಸಿಕ್ಕು ಪರದಾಡಿದರು. ಅದರಲ್ಲಿ ನಟ ಉಪೇಂದ್ರ ಹೊಲಗೇರಿ ಹೇಳಿಕೆ, ಎಚ್‌ಡಿಕೆ ಬಿಜೆಪಿ ಬ್ರಾಹ್ಮಣ ಸಿಎಂ ಹೇಳಿಕೆ, ಭವಾನಿ ರೇವಣ್ಣ ಒಂದೂವರೆ ಕೋಟಿ ರು ಕಾರು ವಿವಾದ​​ ಸೇರಿ ಹಲವು ವಿಷಯಗಳು ಸದ್ದು ಮಾಡಿದ್ದವು.

ಪ್ರತಿ ವರ್ಷದಂತೆ ಈ ಬಾರಿಯೂ ಕಾವೇರಿ ನೀರು ಹೋರಾಟ ನಡೆಯಿತು. ಹೊಸ ಸರ್ಕಾರ ಬಂದದ್ದು ಹಾಗೂ ಮಳೆ ಕಡಿಮೆಯಾಗಿರುವ ಹಿನ್ನೆಲೆ ಈ ಬಾರಿ ಕಾವೇರಿ ವಿವಾದ ದೊಡ್ಡಮಟ್ಟದಲ್ಲಿ ಅಬ್ಬರಿಸಿತು. ಕರ್ನಾಟಕ ಬಂದ್‌, ಬೆಂಗಳೂರು ಬಂದ್‌ ಆಗಿತ್ತು. ರಾಜ್ಯದಲ್ಲಿ ಬರಗಾಲವಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿತ್ತು.

ಚುನಾವಣೆ ಪೂರ್ವದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು, ಬಿಜೆಪಿ ಗೆದ್ದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಈ ವಿಷಯವು ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡಿತು. ಪರ ವಿರೋಧ ಚರ್ಚೆಗಳು ನಡೆದವು. ಜೆಡಿಎಸ್‌ ಕಾಂಗ್ರೆಸ್‌ ಇದನ್ನೆ ಚುನಾವಣೆ ಅಸ್ತ್ರವಾಗಿ ಬಳಸಿಕೊಂಡರು. ಇದರ ಜೊತೆ ಎಚ್‌ಡಿ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಬಗ್ಗೆ ವಿವಾದಿತ ಹೇಳಿಕೆಗಳನ್ನು ನೀಡಿದ್ದರು.

​ನಟ ಉಪೇಂದ್ರ ಅವರು ವಿಡಿಯೋ ಒಂದರಲ್ಲಿ ಹೊಲಗೇರಿ ಪದ ಬಳಕೆ ಮಾಡಿದ್ದರು. ಊರು ಎಂದ ಮೇಲೆ ಹೊಲಗೇರಿ ಇರುತ್ತದೆ ಎಂಬ ಅವರ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ದಲಿತ ಸಂಘಟನೆಗಳು, ಪ್ರಗತಿಪರರು, ಸಮುದಾಯಗಳು ನಟನ ಮೇಲೆ ಕಿಡಿಕಾರಿದ್ದರು. ಬಳಿಕ ಅವರು ಸ್ಪಷ್ಟನೆ ನೀಡಿದ್ದರು. ನಂತರದಲ್ಲಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರು ಕೂಡ ವಿಡಿಯೋ ಒಂದರಲ್ಲಿ ಹೊಲಗೇರಿ ಪದ ಬಳಕೆ ಮಾಡಿದಕ್ಕೆ ಪೊಲೀಸ್‌ ದೂರು ದಾಖಲಾಗಿತ್ತು.

ಹುಲಿ ಉಗುರಿನ ಸರ (ಲಾಕೆಟ್‌) ಧರಿಸುವುದು ಕಾನೂನು ಪ್ರಕಾರ ಅಪರಾಧ. ಬಿಗ್‌ಬಾಸ್‌ ರಿಯಾಲಿಟಿ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಧರಿಸಿದ್ದ ಕಾರಣಕ್ಕೆ ಅವರನ್ನು ಶೋನಿಂದಲೇ ಪೊಲೀಸರು ಬಂಧಿಸಿದ್ದರು. ಬಳಿಕ ಹುಲಿ ಉಗುರು ಧರಿಸಿದ ನಟರು, ರಾಜಕಾರಣಿಗಳ ಫೋಟೊಗಳು ವೈರಲ್‌ ಆದವು. ನಟ ದರ್ಶನ್‌, ನಿಖಿಲ್‌ ಕುಮಾರಸ್ವಾಮಿ, ಲಕ್ಷ್ಮೀ ಹೆಬ್ಬಾಳಕರ್‌ ಪುತ್ರ ಹಾಗೂ ಸಹೋದರ ಸೇರಿದಂತೆ ಹಲವರ ಮನೆಗಳಿಗೆ ಪೊಲೀಸ್‌/ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದರು. ಹಿರಿಯ ನಟ ಜಗ್ಗೇಶ್ ಕೂಡ ತಮ್ಮ ಬಳಿಯಿದ್ದ ಹುಲಿ ಉಗುರು ವಾಪಸ್ ಮಾಡಿದ್ದರು.

ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ ಸಂಸ್ಕೃತಿಯುಳ್ಳವರು ಎಂದು ಹೇಳಿದ್ದಾರೆ. ಈ ಮಾತನಾಡಿದ ಬೆನ್ನಲ್ಲೇ, "ಇದನ್ನು ನಾನು ಹೇಳಿದ್ದಲ್ಲ… ಕುವೆಂಪು ಅವರೇ ಹೇಳಿರೋದು. ಅವರು ಹೇಳಿದ್ದನ್ನು ನಾನಿಲ್ಲಿ ಉಲ್ಲೇಖ ಮಾಡುತ್ತಿದ್ದೇನಷ್ಟೇ’’ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಗೆ ಹಿನ್ನೆಲೆಯೊಂದನ್ನು ಕಟ್ಟಿಕೊಟ್ಟಿದ್ದರು.

ಜೆಡಿಎಸ್‌ ನಾಯಕಿ, ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಕಾರ್‌ಗೆ ಬೈಕ್‌ ಸವಾರನೊಬ್ಬ ಗುದ್ದಿದ್ದನು. ಈ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರು ಸಾಯೋಕೆ ನನ್ನ ಒಂದೂವರೆ ಕೋಟಿ ಕಾರೇ ಬೇಕಿತ್ತಾ ಬಸ್‌ಗೆ ಹೋಗಿ ಗುದ್ದು ಸಾಯಬಾರದ ಎಂದು ದೊಡ್ಡ ಜಗಳ ಮಾಡಿದ್ದರು. ಬೈಕ್‌ ಸವಾರನ ಆರೋಗ್ಯವನ್ನು ವಿಚಾರಿಸದೇ ಅವರು ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಸಾಕಷ್ಟು ದಿನ ಟ್ರೋಲ್‌ ಮಾಡಿದ್ದರು.

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಹೈದರಾಬಾದ್‌ನಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಸ್ಪೀಕರ್‌ಗೆ ಎಲ್ಲಾ ಬಿಜೆಪಿಯರು ಸಲಾಂ ಮಾಡಬೇಕು ಎಂದು ಹೇಳಿಕೆ ನೀಡಿದ್ದರು ವಿವಾದ ಸೃಷ್ಟಿಸಿತ್ತು.

ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿದ್ದು ಪ್ರಧಾನಿ ಮೋದಿ ಎಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಗುರುಗಳ ಕಾರ್ಯಕ್ರಮದಲ್ಲಿ ಉಗ್ರರ ಸಂಪರ್ಕ ಹೊಂದಿರುವ ತನ್ವೀರ್‌ ಹಶ್ಮಿ ಎಂಬುವವರ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್‌ ಆರೋಪಿಸಿದ್ದರು.

​ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಸಮಾಜದಲ್ಲಿ ಕೋಮುಸೌಹಾರ್ಧತೆ ಉಂಟು ಮಾಡುವ ಭಜರಂಗದಳ, ಪಿಎಫ್ಐ ಸೇರಿ ಹಲವು ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂಬ ಘೋಷಣೆ ಮಾಡಿತ್ತು. ಈ ವಿಚಾರವು ಚುನಾವಣೆ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡಿ ಕಾಂಗ್ರೆಸ್‌ಗೆ ಮತ ಹಾಕದಂತೆ ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸಿದರು.

ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ ವಿವಾದ ಸೃಷ್ಟಿಸಿದ್ದು ‘ಉರಿಗೌಡ-ನಂಜೇಗೌಡ’. ಟಿಪ್ಪುವನ್ನು ಕೊಂದಿದ್ದು ‘ಉರಿಗೌಡ-ನಂಜೇಗೌಡ’ ಎಂದು ಬಿಜೆಪಿ ಪ್ರಚಾರ ಮಾಡಿತ್ತು. ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಈ ವಿವಾದ ಜೋರಾಗಿ ಹೊಗೆ ಆಡುತ್ತಿರುವಾಗೇ ನಿರ್ಮಾಪಕ ಮುನಿರತ್ನ ‘ಉರಿಗೌಡ-ನಂಜೇಗೌಡ’ ಹೆಸರನ್ನು ರಿಜಿಸ್ಟರ್ ಮಾಡಿಸಿ ಸಿನಿಮಾ ಮಾಡುವುದಾಗಿ ಘೋಷಿಸಿದರು. ಬಳಿಕ ನಂಜಾವಧೂತ ಸ್ವಾಮಿಗಳವರ ಸಂಧಾನದ ಬಳಿಕ ಸಿನಿಮಾ ನಿರ್ಮಾಣ ಕೈಬಿಟ್ಟರು.

ನಟ ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಗಂಭೀರ ಆರೋಪವನ್ನು ಮಾಡಿದ್ದರು. ಸುದೀಪ್ ಮುಂಗಡ ಹಣ ಪಡೆದು ಕಾಲ್​ಶೀಟ್ ನೀಡುತ್ತಿಲ್ಲ. ಸುದೀಪ್ ಅವರು ಎಂಟು ವರ್ಷಗಳ ಹಿಂದೆಯೇ ನಮ್ಮಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಈ ವರೆಗೆ ಕಾಲ್​ಶೀಟ್ ಕೊಟ್ಟಿಲ್ಲ ಮಾತ್ರವಲ್ಲದೆ ಹಣವನ್ನೂ ಹಿಂತಿರುಗಿಸಿಲ್ಲ ಎಂದಿದ್ದರು. ಕುಮಾರ್ ಅವರು ಫಿಲ್ಮ್​ಚೇಂಬರ್ ಎದುರು ಧರಣಿ ಸಹ ಕೂತರು, ಶಿವರಾಜ್ ಕುಮಾರ್, ರವಿಚಂದ್ರನ್ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.

ನಟ ದರ್ಶನ್ ಮನೆಯ ನಾಯಿ, ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕಚ್ಚಿದ ಪ್ರಕರಣ ನವೆಂಬರ್ ತಿಂಗಳಲ್ಲಿ ಸದ್ದು ಮಾಡಿತು. ಜಿಂದಾಲ್​ ಉದ್ಯೋಗಿ ಮಹಿಳೆಯೊಬ್ಬರಿಗೆ ದರ್ಶನ್ ಮನೆಯ ಸಾಕು ನಾಯಿ ಕಡಿದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮಹಿಳೆ ದರ್ಶನ್ ಅವರನ್ನೂ ಆರೋಪಿಯನ್ನಾಗಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ಬಳಿಕ ದರ್ಶನ್ ಹೆಸರನ್ನು ಕೈಬಿಟ್ಟರು.

ಚಂದ್ರಯಾನ 3 ಪರಿಕ್ರಮಕ್ಕೆ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ದೇವಸ್ಥಾನದಲ್ಲಿ ವಿಕ್ರಂ ಲ್ಯಾಂಡರ್ ನ ಪ್ರತಿಕೃತಿಯನ್ನು ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದನ್ನು ಎಡಪಂಥೀಯರು ವಿರೋಧಿಸಿದ್ದರು. ವೈಜ್ಞಾನಿಕ ಮನೋಭಾವವನ್ನು ಎತ್ತಿಹಿಡಿಯಬೇಕಾಗಿದ್ದ ವಿಜ್ಞಾನಿಗಳು ಮೂಡನಂಬಿಕೆಯನ್ನು ಬಿತ್ತಿದರೆ ಹೇಗೆ ಎಂದು ಪ್ರಶ್ನಿಸಿದ್ದರು.

ಬಿಗ್​ಬಾಸ್ ಕನ್ನಡ ಒಟಿಟಿ ಮಾಜಿ ಸ್ಪರ್ಧಿ ಮತ್ತು ನಟಿ ಸಾನ್ಯಾ ಐಯ್ಯರ್ ಜನವರಿ ಅಂತ್ಯದಲ್ಲಿ ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸಾನ್ಯಾ ಮಾತನಾಡುವಾಗಲೇ ಯುವಕನೊಬ್ಬ ಕುಡಿದು ಅತಿಯಾಗಿ ವರ್ತಿಸಿದ್ದ. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ರೂಂಗೆ ಹೋಗಿ ಗೆಳತಿಯೊಟ್ಟಿಗೆ ಕಂಬಳ ನೋಡಲು ಸಾನ್ಯಾ ಮರಳಿ ಬಂದಾಗ ಅದೇ ಯುವಕ ಸಾನ್ಯಾ ಐಯ್ಯರ್ ಜೊತೆ ಕೆಟ್ಟದಾಗಿ ವರ್ತಿಸಿದ್ದು, ಸಾನ್ಯಾರ ಕೈ, ಕೂದಲು ಹಿಡಿದು ಎಳೆದಾಡಿದ್ದ. ಇದಕ್ಕೆ ಸಾನ್ಯಾ ಹಾಗೂ ಅವರ ಗೆಳತಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com