ರೈತರ ನಿರಾಸೆಗೊಳಿಸಿ, ಸಲಹೆಗಾರರ ನೇಮಿಸಿಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ನಿರಾಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೆರಿಗೆದಾರರ ಹಣ ವೆಚ್ಚ ಮಾಡಿ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್'ಡಿ.ಕುಮಾರಸ್ವಾಮಿಯವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಹೆಚ್'ಡಿ.ಕುಮಾರಸ್ವಾಮಿ
ಹೆಚ್'ಡಿ.ಕುಮಾರಸ್ವಾಮಿ

ಬೆಂಗಳೂರು: ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ನಿರಾಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೆರಿಗೆದಾರರ ಹಣ ವೆಚ್ಚ ಮಾಡಿ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್'ಡಿ.ಕುಮಾರಸ್ವಾಮಿಯವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿವೆ. ಒಂದು ಕಡೆ ವಸೂಲಿ ಮಾಡಬೇಡಿ ಎಂದು ಹೇಳುತ್ತಾರೆ. ಮತ್ತೊಂದು ಕಡೆ ವಸೂಲಿ ಮಾಡುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆ ಇದೆಯೇ? ಮಾತೆತ್ತಿದ್ದರೆ ಮೂವರು ಡೆಪ್ಯುಟಿ ಸಿಎಂ ಬಗ್ಗೆ ಮಾತನಾಡುತ್ತಾರೆ. ನಿನ್ನೆ ಒಂದು ಅದ್ಭುತವಾದ ಆರ್ಡರ್ ನೋಡಿದೆ. ಹಿರಿಯ ಶಾಸಕರಿಗೆ ಹುದ್ದೆಗಳನ್ನು ಕೊಟ್ಟಿದ್ದಾರೆ. 14 ಬಜೆಟ್ ಮಂಡನೆ ಮಾಡಿದವರು ಸಿದ್ದರಾಮಯ್ಯ. ಅವರಿಗೆ ಆರ್ಥಿಕ ಸಲಹೆಗಾರರನ್ನು ನೇಮಿಸಿದ್ದಾರೆ. ಅನುಭವ ಇರುವ ತಜ್ಞರನ್ನು ನೇಮಿಸಿಕೊಂಡಿಲ್ಲ. ಇವೇನು ಗಂಜಿ ಕೇಂದ್ರಗಳೇ? ಎಂದು ವ್ಯಂಗ್ಯವಾಡಿದರು.

ಆರ್.ವಿ. ದೇಶಪಾಂಡೆ ಅವರು 25 ವರ್ಷ ಮಂತ್ರಿಗಳಾಗಿದ್ದವರು. ಅವರನ್ನು ಆಡಳಿತ ಸುಧಾರಣೆ ಆಯೋಗಕ್ಕೆ ನೇಮಿಸಿದ್ದಾರೆ. ಹಿಂದೆ ಹಾರನಹಳ್ಳಿ ರಾಮಸ್ವಾಮಿ ಅವರನ್ನು ನೇಮಿಸಿದ್ದರು. ವಿಜಯಭಾಸ್ಕರ್ ಆಯೋಗ ಮಾಡಿ ವರದಿ ಪಡೆದಿದ್ದರು. ಈ ವರದಿ ಪಡೆದು ಏನು ಸುಧಾರಣೆ ತಂದಿದ್ದೀರಿ? ಈಗ ದೇಶಪಾಂಡೆಯವರನ್ನು ಮಾಡಿದ್ದೀರಿ. ವಿಧಾನಸೌಧದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದೀರಿ. ಈಗ ದೇಶಪಾಂಡೆ ಕೈಯಲ್ಲಿ ಏನು ಸುಧಾರಣೆ ಮಾಡಿಸುತ್ತೀರಿ? ಬಿ.ಆರ್. ಪಾಟೀಲ್ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯಗಿಂತ ದೊಡ್ಡವರು ಬೇಕಾ? ಅವರಿಗೆ ಆರ್ಥಿಕ ಕಾರ್ಯದರ್ಶಿ ನೇಮಕ ಬೇಕಾ? ಬಿ.ಆರ್. ಪಾಟೀಲರಿಗೆ ಯಾವ ಅನುಭವ ಇದೆ? ಎಂದು ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕದಿಂದ ಖಾಲಿ ಮಾಡಿಸಿದ್ದು ಯಾರು? ಆವಾಗ ನಿಮಗೆ ಬಿ.ಆರ್.ಪಾಟೀಲ್ ಸಲಹೆ ಕೊಟ್ಟಿದ್ದರಾ? ಯಾವ ಕಾರಣಕ್ಕೆ ಸಲಹೆಗಾರರನ್ನಾಗಿ ಮಾಡಿಕೊಂಡಿರಿ? ನಾನು ಎರಡು ಬಾರಿ ಸಿಎಂ ಆಗಿದ್ದೆ. ಅದೂ 10-15 ತಿಂಗಳು ಆಗಿದ್ದೆ ಬಿಡಿ. ಆದರೆ, ಸಿದ್ದರಾಮಯ್ಯ ಅವರಂತೆ ಸುದೀರ್ಘ ಅವಧಿಗೆ ಆಗಿದ್ದೆನಾ? ಸಿದ್ದರಾಮಯ್ಯ ಅವರೇ ನಿಮಗೆ ಬಿ.ಆರ್.ಪಾಟೀಲರ ಸಲಹೆ ಬೇಕಾ? ಈ ಸರ್ಕಾರ ಗ್ಯಾರಂಟಿ ಬಗ್ಗೆ ಚರ್ಚೆ ಬಿಟ್ಟರೆ ಬೇರೆ ಏನಾದರೂ ಮಾಡಿದೆಯಾ? ಬರಗಾಲದ ಹೇಳಿಕೆಗಳಿಗೆ ಸರ್ಕಾರ ಸೀಮಿತವಾಗಿದೆಯೇ ಹೊರತು ಅದಕ್ಕೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ.

ರಾಜ್ಯದಲ್ಲಿ ಈ ವರ್ಷ ಚುನಾವಣೆ ನಡೆದವು. ಹೊಸ ಸರ್ಕಾರ ರಚನೆ ಆಯ್ತು. ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದರು. ಅದರ ಬಗ್ಗೆ ನಮಗೆ ಯಾವುದೇ ಅಸೂಯೆ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನೆನಪಿಸಲು ಜಾಹೀರಾತುಗಳನ್ನು ಕೊಡುತ್ತಿದ್ದೀರಿ. ಆದರೆ, ನುಡಿದಂತೆ ನಡೆದೆವು ಎಂದು ಸಾಕಷ್ಟು ಭಾರಿ ಜಾಹೀರಾತು ಕೊಡುವ ಅವಶ್ಯಕತೆ ಇರಲಿಲ್ಲ. ಇದನ್ನು ನೋಡಿದರೆ ಅಯ್ಯೋ ಎಂದಿನಿಸುತ್ತದೆ. 8 ತಿಂಗಳ ಅವದಿಯಲ್ಲಿ ಗ್ಯಾರಂಟಿ ಭಜನೆ ಬಿಟ್ಟರೆ ಬೇರೆ ಏನು ಮಾಡಿದ್ದಾರೆ? ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೇ?

ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಬರ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಕೇಂದ್ರವು ಈಗಾಗಲೇ ವರದಿಯನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಎನ್‌ಡಿಆರ್‌ಎಫ್ ಅಡಿಯಲ್ಲಿ ಹಣ ಬಿಡುಗಡೆ ಮಾಡಲಿದೆ. ಆದರೆ ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಪ್ರತಿ ರೈತನಿಗೆ 2 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿಲ್ಲ. ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com