ಮಗುವಿಗೆ ಜನ್ಮನೀಡಿ ಬಾಣಂತಿ ಸಾವು; ವರದಿ ಬಳಿಕ ಶಿಸ್ತುಕ್ರಮ ಎಂದ ಆರೋಗ್ಯ ಇಲಾಖೆ

ಮಗುವಿಗೆ ಜನ್ಮನೀಡಿ ಬಾಣಂತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಕೇಳಿರುವ ರಾಜ್ಯ ಆರೋಗ್ಯ ಇಲಾಖೆ ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಬಾಣಂತಿ ಸಾವು
ಬಾಣಂತಿ ಸಾವು

ಚಿಕ್ಕಮಗಳೂರು: ಮಗುವಿಗೆ ಜನ್ಮನೀಡಿ ಬಾಣಂತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಕೇಳಿರುವ ರಾಜ್ಯ ಆರೋಗ್ಯ ಇಲಾಖೆ ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಚಿಕ್ಕಮಗಳೂರಿನಲ್ಲಿ ಈ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಂಜಿತ ಬಾಯಿ (೨೧) ರಾತ್ರಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 

ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ರಂಜಿತ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು, ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ರಂಜಿತಾ ಜನ್ಮ ನೀಡಿದ್ದಳು. ರಾತ್ರಿ ಏಕಾಏಕಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದರೂ ಯಾವೊಬ್ಬ ಸಿಬ್ಬಂದಿಯು ಚಿಕಿತ್ಸೆ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿದ್ದಾಗಿ ಆರೋಪಗಳು ಕೇಳಿ ಬಂದಿದೆ. 

ಸಖರಾಯಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ರಂಜಿತ ವರ್ಷದ ಹಿಂದೆ ಶಶಿಧರ್ ನಾಯಕ್ ಎಂಬವರನ್ನು ಮದುವೆಯಾಗಿದ್ದಳು. ಇದೀಗ ವೈದ್ಯರ ಕಾರಣಕ್ಕೆ ತಾಯಿ ಮೃತಪಟ್ಟಿದ್ದು ಮಗು ಅನಾಥವಾಗಿದೆ.

ವರದಿ ಬಳಿಕ ಶಿಸ್ತುಕ್ರಮ ಎಂದ ಆರೋಗ್ಯ ಇಲಾಖೆ
ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿರುವ ಘಟನೆಯು ಅತ್ಯಂತ ದುರಾದೃಷ್ಟಕರ. ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಘಟನೆಗೆ ವಿಷಾದ ವ್ಯಕ್ತಪಡಿಸುವುದರ ಜೊತೆಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾಧಿಕಾರಿಗಳಿಗೆ ಘಟನೆ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ವರದಿ ಬಂದ ಬಳಿಕ ವೈದ್ಯರು,  ಆರೋಗ್ಯ ಸಿಬ್ಬಂದಿಗಳಿಂದ ಕರ್ತವ್ಯ ಲೋಪವಾಗಿದ್ದರೆ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com