ಬೆಂಗಳೂರು: ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಎಚ್.ಎನ್. ಧರ್ಮೇಂದ್ರ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ವಿಶೇಷ ಘಟಕದ ಎಸಿಪಿ ಆಗಿರುವ ಧರ್ಮೇಂದ್ರ ಅವರನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿದೆ.
ಎಸಿಪಿ ವರ್ಗಾವಣೆ ಬೆನ್ನಲ್ಲೇ ಪ್ರಕರಣ ಸಂಬಂಧ ಸೋಮವಾರ ನಡೆಯಬೇಕಿದ್ದ ಇನ್‌ಸ್ಪೆಕ್ಟರ್ ಪ್ರವೀಣ್ ವಿಚಾರಣೆ ಸಹ ರದ್ದಾಗಿದ್ದು, ಮಹತ್ವದ ಘಟ್ಟತಲುಪಿದ್ದ ತನಿಖೆಗೆ ಈಗ ತ್ರಿಶಂಕು ಪರಿಸ್ಥಿತಿ ಎದುರಾಗಿದೆ. ಈ ನಡುವೆ ತನ್ನ ಪತ್ನಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ವಶದಲ್ಲಿದ್ದ ಸ್ಯಾಂಟ್ರೋ ರವಿ ಮತ್ತೆ ಮೈಸೂರು ಕೇಂದ್ರ ಕಾರಾಗೃಹ ಸೇರಿದ್ದಾನೆ.
ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ, ತನ್ನ ಪತ್ನಿ ಹಾಗೂ ಅವರ ಸಹೋದರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಸಂಚು ರೂಪಿಸಿದ್ದರು. ಕಾಟನ್‌ಪೇಟೆ ಇನ್‌ಸ್ಪೆಕ್ಟರ್ ಪ್ರವೀಣ್, ವರ್ಗಾವಣೆ ಆಸೆಗಾಗಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸುಳ್ಳು ದರೋಡೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ಹೇಳಿಕೆ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಧರ್ಮೇಂದ್ರ ಅವರು, ಮುಂದಿನ ಹಂತದ ತನಿಖೆ ಸಲುವಾಗಿ ಇನ್‌ಸ್ಪೆಕ್ಟರ್ ಪ್ರವೀಣ್‌ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅಲ್ಲದೆ ತನ್ನ ಪತ್ನಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ತನಿಖೆ ನಂತರ ಆತನನ್ನು ಸುಳ್ಳು ದರೋಡೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ತನಿಖಾಧಿಕಾರಿ ಸಿದ್ದತೆ ನಡೆಸಿದ್ದರು. ಆದರೀಗ ತನಿಖಾಧಿಕಾರಿಯನ್ನು ಪೊಲೀಸ್ ಇಲಾಖೆ ಬದಲಾಯಿಸಿದೆ.
Advertisement