ವಿದ್ಯುತ್‌ ಸರಬರಾಜಿನಲ್ಲಿ ಸ್ಪರ್ಧಾತ್ಮಕತೆ ತರಲು ಖಾಸಗಿ ವಿದ್ಯುತ್‌ ಸರಬರಾಜು ಕಂಪನಿಗಳು ಅಗತ್ಯ: ಇಂಧನ ಸಚಿವ ಆರ್.ಕೆ.ಸಿಂಗ್

ಸರ್ಕಾರವು ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿಲ್ಲ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸ್ಪರ್ಧೆಯನ್ನು ಬೆಳೆಸಲು ವೇದಿಕೆಯನ್ನು ಸೃಷ್ಟಿಸುತ್ತಿದೆ ಎಂದು  ಕೇಂದ್ರ ಇಂಧನ, ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಇಂಧನ ಸಚಿವ ಆರ್.ಕೆ.ಸಿಂಗ್
ಇಂಧನ ಸಚಿವ ಆರ್.ಕೆ.ಸಿಂಗ್

ಬೆಂಗಳೂರು: ಸರ್ಕಾರವು ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿಲ್ಲ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸ್ಪರ್ಧೆಯನ್ನು ಬೆಳೆಸಲು ವೇದಿಕೆಯನ್ನು ಸೃಷ್ಟಿಸುತ್ತಿದೆ ಎಂದು  ಕೇಂದ್ರ ಇಂಧನ, ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿ20 ರಾಷ್ಟ್ರಗಳ ಮೊದಲ ಎನರ್ಜಿ ಟ್ರಾನ್ಸಿಶನ್ಸ್ ವರ್ಕಿಂಗ್ ಗ್ರೂಪ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆರ್.ಕೆ.ಸಿಂಗ್ ಅವರು ಮಾತನಾಡಿದರು.

ವಿದ್ಯುತ್ ಸರಬರಾಜು ಕಂಪೆನಿಗಳ ನಡುವೆ ಸ್ಪರ್ಧೆ ಏರ್ಪಟ್ಟರೆ ಇಂಧನ ಉಳಿತಾಯದ ಜತೆಗೆ ಗ್ರಾಹಕರಿಗೆ ಕೈಗೆಟುಕುವ ದರಕ್ಕೆ ಇಂಧನ ದೊರೆಯುತ್ತದೆ. ಯಾವುದಾದರೂ ವಿದ್ಯುತ್ ಸರಬರಾಜು ಕಂಪೆನಿ ಸರಿಯಾಗಿ ಸೇವೆ ನೀಡದಿದ್ದರೆ, ಗ್ರಾಹಕರು ಮೊಬೈಲ್ ನೆಟ್‍ವರ್ಕ್ ಸೇವೆಯ ರೀತಿ ವಿದ್ಯುತ್ ಸರಬರಾಜು ಕಂಪೆನಿಯನ್ನು ಬದಲಾಯಸಿಕೊಳ್ಳಬಹುದು ಎಂದು ಹೇಳಿದರು.

ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧೆ ಇರಬೇಕು. ಗ್ರಿಡ್‍ಗಳು ಸರಕಾರದ ಬಳಿಯೇ ಇರುತ್ತವೆ. ಕೇಂದ್ರ ಸರಕಾರವು ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾನೂನಿಗೆ ತಿದ್ದುಪಡಿ ತರಲು ಬಯಸಿದೆ. ಈ  ಉದ್ದೇಶಿತ ತಿದ್ದುಪಡಿಗಳು ಇಂಧನ ಸುರಕ್ಷತೆ, ವಿತರಣಾ ವ್ಯವಸ್ಥೆಯಲ್ಲಿ ಅಮೂಲಾಗ್ರಹ ಬದಲಾವಣೆ ತರಲಿವೆ. ಇಂಧನ ಸರಬರಾಜು ನಷ್ಟ ತಗ್ಗಿ ಇಂಧನ ಉಳಿತಾಯದ ಪ್ರಮಾಣ ಹೆಚ್ಚುತ್ತದೆ. ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮುಂಬೈಯಲ್ಲಿ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಸರಬರಾಜು ಪೂರೈಕೆ ಆಗುತ್ತಿದೆ. ಆದರೆ ಕೆಲವು ಕಾರಣಗಳಿಂದ ಅದು ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಇಂತಹ ಸಮಸ್ಯೆಗಳನ್ನು ಕಾನೂನಿಗೆ ತಿದ್ದುಪಡಿ ತರುವ ಮೂಲಕ ಬಗೆಹರಿಸಲು ಬಯಸಿದ್ದೇವೆ ಎಂದರು,

ಮಾಲಿನ್ಯ ತಡೆ ಮತ್ತು ಇಂಧನ ಪರಿವರ್ತನೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಆದರೆ, ದೇಶವು ಇಂಧನ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇಂಧನ ಪರಿವರ್ತನೆಗೆ ಸಂಬಂಧಿಸಿದಂತೆ ಬಡ ರಾಷ್ಟ್ರಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲಿದೆ. ಜಿ-20 ರಾಷ್ಟ್ರಗಳು ಜಗತ್ತಿನ ಜಿಡಿಪಿಯ ಶೇಕಡ 85ರಷ್ಟು ಮತ್ತು ಜಗತ್ತಿನ ಒಟ್ಟು ವಿದೇಶಿ ವ್ಯಾಪಾರದ ಶೇ 75ರಷ್ಟನ್ನು ಹೊಂದಿವೆ. ಈ ರಾಷ್ಟ್ರಗಳು ಅಭಿವೃದ್ಧಿಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಭಾರತವು ಚರ್ಚೆಯ ಮುನ್ನೆಲೆಗೆ ತರುತ್ತಿದೆ ಎಂದು ಹೇಳಿದರು.

2005ರ ಪ್ರಮಾಣಕ್ಕೆ ಹೋಲಿಸಿದರೆ ಮಾಲಿನ್ಯದ ಪ್ರಮಾಣವನ್ನು ಶೇ 33ರಷ್ಟು ತಗ್ಗಿಸಬೇಕು ಎಂಬ ತೀರ್ಮಾನವನ್ನು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2030ರ ವೇಳೆಗೆ ಭಾರತವು ಈ ಗುರಿ ತಲುಪಲಿದೆ.  ನಾವು ಈಗಾಗಲೇ ಶೇ 30ರಷ್ಟು ಮಾಲಿನ್ಯ ತಗ್ಗಿಸುವ ಗುರಿ ತಲುಪುವ ಹಂತದಲ್ಲಿದ್ದೇವೆ. ಪಳೆಯುಳಿಕೆಯೇತರ ಇಂಧನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇಂಧನ ಲಭ್ಯತೆ, ಇಂಧನ ಭದ್ರತೆ ಮತ್ತು ಇಂಧನ ಬಳಕೆಯ ಅವಕಾಶಗಳ ಕುರಿತು ಮುಕ್ತವಾದ ಚರ್ಚೆಯನ್ನು ದೇಶವು ಬಯಸುತ್ತದೆ.

ಮಾಲಿನ್ಯ ತಗ್ಗಿಸುವ ವಿಚಾರದಲ್ಲಿ ಗುರಿ ತಲುಪಲು ಬಡ ರಾಷ್ಟ್ರಗಳು ಭಾರತದಂತೆ ಸಂಪನ್ಮೂಲಗಳನ್ನು ಹೊಂದಿಲ್ಲ. ಈಗಲೂ 60ರಿಂದ 80 ಕೋಟಿಯಷ್ಟು ಜನರಿಗೆ ವಿದ್ಯುತ್‌ ಸಂಪರ್ಕವೇ ಲಭಿಸಿಲ್ಲ. ಅಂತಹ ದೇಶಗಳ ಧ್ವನಿಯಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ. ಇಂಧನ ಬಳಕೆಯ ಅವಕಾಶ ಮತ್ತು ಇಂಧನ ಭದ್ರತೆಯ ಸಮಸ್ಯೆಗಳೇ ಪರಿಹಾರ ಆಗದೇ ಉಳಿದಿರುವಾಗ ಇಂಧನ ಪರಿವರ್ತನೆಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ನವೀಕರಿಸಬಹುದಾದ ಇಂಧನ ಮೂಲಗಳ ಒತ್ತಡದ ಹೊರತಾಗಿಯೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ತೆರವು ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಲ್ಲಿದ್ದಲು ಅವಲಂಬಿತ ವಿದ್ಯುತ್‌ ಯೋಜನೆಗಳನ್ನು ದೇಶವು ಮುಂದುವರಿಸಲಿದೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನದ ಗುಣಮಟ್ಟ ಹೆಚ್ಚಳಕ್ಕೆ ಅಗತ್ಯವಿರುವಷ್ಟು ವಿದ್ಯುತ್‌ ಪೂರೈಕೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವಿದ್ಯುತ್‌ ಯಾವ ಮೂಲದಿಂದಾದರೂ ಲಭಿಸಲಿ, ಅದನ್ನು ಪೂರೈಕೆ ಮಾಡುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com