ಕಾವೇರಿ ನದಿ ನೀರು ಹರಿವು ಕಡಿಮೆ ಮಾಡಿ ಭಕ್ತರ ರಕ್ಷಿಸಿ ಸರ್ಕಾರಕ್ಕೆ ಡಿಕೆ.ಶಿವಕುಮಾರ್ ಮನವಿ: ತಜ್ಞರ ಕಳವಳ

ರಾಮನಗರ ಮತ್ತು ಕನಕಪುರದಿಂದ ಪ್ರತಿ ವರ್ಷ ಶಿವರಾತ್ರಿಯಂದು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವ ಯಾತ್ರಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾವೇರಿ ನದಿ ನೀರಿನ ಹರಿವನ್ನು ಕಡಿಮೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಹುಬ್ಬಳ್ಳಿ: ರಾಮನಗರ ಮತ್ತು ಕನಕಪುರದಿಂದ ಪ್ರತಿ ವರ್ಷ ಶಿವರಾತ್ರಿಯಂದು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವ ಯಾತ್ರಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾವೇರಿ ನದಿ ನೀರಿನ ಹರಿವನ್ನು ಕಡಿಮೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾಶಿವರಾತ್ರಿ ಅಂಗವಾಗಿ ಪ್ರತಿವರ್ಷ ತಾಲೂಕು ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟ ತಲುಪಿ ಮಲೆ ಮಹಾದೇಶ್ವರನ ದರ್ಶನ ಪಡೆಯುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಹಾಶಿವರಾತ್ರಿಗೂ ಒಂದು ವಾರಗಳ ಮುನ್ನವೇ ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆ ಆರಂಭ ಮಾಡುವ ಭಕ್ತರು, ಮಹಾಶಿವರಾತ್ರಿಯಂದು ಬೆಟ್ಟದಲ್ಲಿ ಜಾಗರಣೆ ಮಾಡಿ ದೇವರ ದರ್ಶನ ಪಡೆದರೆ ಎಂತಹ ಹರಕೆಗಳಿದ್ದರೂ ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ, ಪ್ರತಿ ವರ್ಷ ಹರಕೆ ಹೊರುವ ಲಕ್ಷಾಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರತಿ ವರ್ಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಾರೆ.ಆದರೆ, ಕಳೆದ ವರ್ಷ ಮಲೆ ಮಹದೇಶ್ವರನ ದರ್ಶನಕ್ಕೆ ತೆರಳಿದ್ದ ಭಕ್ತರು, ಕಾವೇರಿ ಪಾಲಾದ ಘಟನೆ ನಡೆದಿತ್ತು.

ಕಳೆದ ವರ್ಷ ಮಹಾಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗುವಾಗ ಸಂಗಮದ ಕಾವೇರಿ ನದಿ ದಾಟುವಾಗ ಹಲವಾರು ಭಕ್ತರು ನೀರಿನಲ್ಲಿ ಕೋಚ್ಚಿ ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದರು.

ಈ ಘಟನೆ ಮರುಕಳುಹಿಸದಂತೆ ಎಚ್ಚರಿಕೆ ಕ್ರಮಗಳ ಕೈಗೊಳ್ಳುವಂತೆ ಡಿಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆದ ಡಿಕೆ.ಶಿವಕುಮಾರ್ ಅವರು, ಪ್ರತಿವರ್ಷ ಬೆಂಗಳೂರು ಗ್ರಾಮಾಂತರ ಹಾಗೂ ಜಿಲ್ಲೆಯನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಹಾಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೊಗುವ ಪದ್ಧತಿ ಇದೆ.ಕಳೆದ ವರ್ಷ ಕಾಲ್ನಡಿಗೆಯಲ್ಲಿ ತೆರಳುವಾಗ ಕಾವೇರಿ ನದಿಯಲ್ಲೇ ಐದಾರು ಮಂದಿ ಭಕ್ತರು ಕೊಚ್ಚಿ ಹೋಗಿದ್ದರು. ಹಾಗಾಗಿ,ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಮಂದಿ ಭಕ್ತರು, ಕಾಲ್ನಡಿಗೆಯಲ್ಲಿ ತೆರಳುವುದರಿಂದ ಭಕ್ತರಿಗೆಅನುಕೂಲವಾಗುವಂತೆ ನದಿಯ ನೀರನ್ನು ಕಡಿಮೆ ಮಾಡಿ ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಭಕ್ತರಿಗೆ ಅನುಕೂಲ ಕಲ್ಪಿಸಿ ಜೊತೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಡಿಕೆ.ಶಿವಕುಮಾರ್ ಅವರ ಈ ಪತ್ರವನ್ನು ವನ್ಯಜೀವಿ ತಜ್ಞರು ಪ್ರಶ್ನೆ ಮಾಡಿದ್ದಾರೆ. ಆನೆಗಳು ಮತ್ತು ಮೊಸಳೆಗಳ ಉತ್ತಮ ಸಂಖ್ಯೆ ಇರುವ ಸೂಕ್ಷ್ಮ ಕಾವೇರಿ ವನ್ಯಜೀವಿ ಅಭಯಾರಣ್ಯದ ಮೂಲಕ ಭಕ್ತರ ಕಾಲ್ನಡಿಗೆ ಹೋಗುತ್ತದೆ. ಕಾವೇರಿ ನದಿ ನೀರನ್ನು ಕಡಿಮೆ ಮಾಡುವ ಬದಲು ಅರಣ್ಯದಲ್ಲಿ ಸಂಚರಿಸುವ ಪದ್ಧತಿಗೆ ಕಡಿವಾಣ ಹಾಕುವಂತೆ ಇಲಾಖೆಗೆ ಆಗ್ರಹಿಸಿದ್ದಾರೆ.

ಭಕ್ತರ ಕಾಲ್ನಡಿಗೆಗೆ ಪರ್ಯಾಯ ಮಾರ್ಗಗಳನ್ನೂ ಸೂಚಿಸಿರುವ ತಜ್ಞರು, ಕನಕಪುರದಿಂದ ಮಳವಳ್ಳಿ ಮತ್ತು ಕೊಳ್ಳೇಗಾಲದ ಮೂಲಕ ಎಂಎಂ ಹಿಲ್ಸ್‌ಗೆ ಹಲವಾರು ಬಸ್‌ಗಳು ಚಲಿಸುತ್ತವೆ. ಭಕ್ತರು ಕಾಲ್ನಡಿಗೆಗೆ ಈ ಮಾರ್ಗವನ್ನು ಬಳಸಿಕೊಳ್ಳಬಹುದು. ಅರಣ್ಯ ಮಾರ್ಗವು ಚಿಕ್ಕದಾಗಿರುವುದರಿಂದ, ಜನರು ಬೊಮ್ಮಸಂದ್ರ ಎಂಬ ಪ್ರದೇಶದಲ್ಲಿ ಬೀಡುಬಿಟ್ಟು ಮುಂದೆ ಸಾಗುತ್ತಾರೆ. ಚಿರತೆಗಳು ಹೆಚ್ಚಿನ ಸಂಖ್ಯೆಯಿರುವ ಕಾಡಿನಲ್ಲಿ ಸುಮಾರು ಎರಡು ಲಕ್ಷ ಜನ ಸೇರುತ್ತಾರೆ. ಇಷ್ಟು ಜನ ಸೇರುವವರಿಗೆ ಅರಣ್ಯ ಇಲಾಖೆ ರಕ್ಷಣೆ ನೀಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಯಾತ್ರಾರ್ಥಿಗಳು ದಾರಿಯಲ್ಲಿ ಅಡುಗೆ ಮಾಡುತ್ತಾರೆ ಮತ್ತು ಅರಣ್ಯ ಪ್ರದೇಶದಲ್ಲಿ ಇರುವ ದೇಗುಲಗಳಲ್ಲಿ ಪೂಜೆಗಳನ್ನು ಮಾಡುತ್ತಾರೆ. ಇದರಿಂದ "ಕಾಡ್ಗಿಚ್ಚಿನ ಆತಂಕ ಯಾವಾಗಲೂ ಇರುತ್ತದೆ. ಈ ಋತುವಿನಲ್ಲಿ ಹುಲ್ಲು ಒಣಗುತ್ತದೆ, ಅರಣ್ಯ, ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಕಾವೇರಿ ನದಿ ನೀರು ಕಡಿಮೆ ಮಾಡಿ ಭಕ್ತರ ರಕ್ಷಣೆಗೆ ಮುಂದಾಗುವಂತೆ ಡಿಕೆ.ಶಿವಕುಮಾರ್ ಅವರು ಜನವರಿ 30 ರಂದು ಪತ್ರ ಬರೆದಿದ್ದು, ಈ ಪತ್ರವನ್ನು ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com