ಏತ ನೀರಾವರಿಗೆ ಯೋಜನೆ ಪೂರ್ಣಗೊಳಿಸಲು 3.5 ಕೋಟಿ ರೂ. ನೀಡಿದ ಶಾಸಕ ಶ್ರೀಮಂತ್ ಪಾಟೀಲ್: ಕಾಂಗ್ರೆಸ್ ಕಿಡಿ

ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಶಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಅವರು, ತಮ್ಮ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 3.50 ಕೋಟಿ ರೂ.ಗಳ ಚೆಕ್ ಅನ್ನು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಶಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಅವರು, ತಮ್ಮ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 3.50 ಕೋಟಿ ರೂ.ಗಳ ಚೆಕ್ ಅನ್ನು ನೀಡಿದ್ದಾರೆ.

ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಚೆಕ್ ಮುಖಾಂತರ ಶಾಸಕ ಶ್ರೀಮಂತ ಪಾಟೀಲ್ ಅವರು ಹಣ ನೀಡಿದ್ದಾರೆಂದು ತಿಳಿದುಬಂದಿದೆ. ಯೋಜನೆಯ ಗುತ್ತಿಗೆ ಪಡೆದಿರುವ ಯುಕ್ತಾ ಎಲೆಕ್ಟ್ರಿಕಲ್ಸ್'ಗೆ ಶ್ರೀಮಂತ ಪಾಟೀಲ್ ಅವರು ಚೆಕ್ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಮಂತ್ ಪಾಟೀಲ್ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮಾರ್ಚ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಅತಿದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಇದು ಒಂದಾಗಿದೆ. 36 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು,

ಸರ್ಕಾರದ ಬದಲಾದ ಹಿನ್ನೆಲೆಯಲ್ಲಿ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿತ್ತು. ಜನರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ಶ್ರೀಮಂತ್ ಪಾಟೀಲ್ ಅವರು, ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುತ್ತಾರೆಂದು ಹೇಳಿದ್ದರು. ಆದರೆ, ಸರ್ಕಾರದಿಂದ ಯೋಜನೆಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇದೀಗ ಸ್ವತಃ ಹಣ ನೀಡಿರುವ ಶ್ರೀಮಂತ್ ಪಾಟೀಲ್ ಅವರು ಫೆಬ್ರವರಿ ತಿಂಗಳಿನಲ್ಲಿ ಯೋಜನೆ ಉದ್ಘಾಟನೆ ಮಾಡುವುದಾಗಿ ಹೇಳಿದ್ದಾರೆ.

ಆದರೆ, ಚುನಾವಣೆಗೂ ಮುನ್ನ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.

ಭಾರತೀಯ ಚುನಾವಣಾ ಆಯೋಗವು ಚುನಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನಂತರ ಯೋಜನೆಯನ್ನು ಉದ್ಘಾಟಿಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಶ್ರೀಮಂತ್ ಪಾಟೀಲ್ ಅವರ ಈ ಕಾರ್ಯಕ್ಕೆ ಕೆಲ ನಾಯಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ತೀವ್ರವಾಗಿ ಕಿಡಿಕಾರಿದ್ದಾರೆ.

ಕಾಗವಾಡದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ರಾಜು ಕಾಗೆ ಅವರು ಮಾತನಾಡಿ, ಸರ್ಕಾರ ದಿವಾಳಿಯಾಗಿದೆ. ಹೀಗಾಗಿಯೇ ಶಾಸಕರು ಯೋಜನೆಗೆ ಹಣ ನೀಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ನೀರಾವರಿ ಯೋಜನೆ ತ್ವರಿತಗೊಳಿಸದೆ ಹಲವು ವರ್ಷಗಳಿಂದ ಮೌನ ವಹಿಸಿದ್ದ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆಯೇ ತರಾತುರಿಯಲ್ಲಿ ಯೋಜನೆ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಇಂತಹ ಬೃಹತ್ ಯೋಜನೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಲು ಹೇಗೆ ಸಾಧ್ಯ?’’ ಎಂದು ಮತ್ತೊಬ್ಬ ಕಾಂಗ್ರೆಸ್ ಮುಖಂಡ ಪ್ರಶ್ನಿಸಿದ್ದಾರೆ.

ಈ ಯೋಜನೆಯಿಂದ ಕಾಗವಾಡ ಕ್ಷೇತ್ರದ 22 ಬರಪೀಡಿತ ಪ್ರದೇಶಗಳ 67,462 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಯೋಜನೆಯಡಿ 1363.48 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದ್ದು, 55 ಕಿ.ಮೀ ವರೆಗೆ ಕಾಲುವೆ ನಿರ್ಮಿಸಿ ಹೊಲಗಳಿಗೆ ನೀರು ಹರಿಸಲು ವೆಚ್ಚ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com