
ಉಡುಪಿ: ಕೋವಿಡ್ ನಿಂದಾಗಿ ಈಗಲೂ ಅಮೆರಿಕದಲ್ಲಿ ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದು, ಉಕ್ರೇನ್-ರಷ್ಯಾ ಯುದ್ಧಕ್ಕೆ ಬ್ರೇಕ್ ಹಾಕಿ ಭಾರತೀಯರ ರಕ್ಷಿಸಿದ್ದು ಪ್ರಧಾನಿ ಮೋದಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಏಪ್ರಿಲ್-ಮೇ ಆಸುಪಾಸಿನಲ್ಲಿ ಚುನಾವಣೆ ನಡೆಯಲಿದ್ದು, ಇದೇ ಕಾರಣಕ್ಕಾಗಿ ಕರ್ನಾಟಕ ಪ್ರವಾಸದಲ್ಲಿರುವ ಜೆಪಿನಡ್ಡಾ ಇಂದು ಉಡುಪಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಕಾರ್ಯಗಳನ್ನು ಶ್ಲಾಘಿಸಿದರು.
"ನೀವೆಲ್ಲರೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ದೂರದರ್ಶನದಲ್ಲಿ ನೋಡಿರುತ್ತೀರಿ.. ಅವರು ಈಗಲೂ ಕೋವಿಡ್ ಭೀತಿಯಿಂದ ಮಾಸ್ಕ್ ಧರಿಸುತ್ತಾರೆ.. ಏಕೆಂದರೆ ಅಮೆರಿಕದಲ್ಲಿ ಈಗಲೂ ಕೋವಿಡ್ ಸಾಂಕ್ರಾಮಿಕ ಭೀತಿ ಇದ್ದು, ಅಲ್ಲಿ ಕೇವಲ 76%ರಷ್ಟು ಮಾತ್ರ ಲಸಿಕೀಕರಣ ನಡೆದಿದೆ. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಇಲ್ಲಿ ಯಾರೂ ಮಾಸ್ಕ್ ಧರಿಸಿಲ್ಲ ಮತ್ತು ಎಲ್ಲರೂ ಪರಸ್ಪರ ಹತ್ತಿರ ಕುಳಿತಿರುವುದನ್ನು ನಾನು ನೋಡುತ್ತೇನೆ.. ಏಕೆಂದರೆ ಪ್ರಧಾನಿ ಮೋದಿ ನಮಗೆ 220 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಅಂತೆಯೇ ಉಕ್ರೇನ್-ರಷ್ಯಾ ಯುದ್ಧ ಕುರಿತು ಮಾತನಾಡಿದ ಅವರು, ಉಕ್ರೇನ್-ರಷ್ಯಾ ಯುದ್ಧದ ನಡುವೆಯೂ ಭಾರತ ದೇಶ ಯುದ್ಧಗ್ರಸ್ಥ ಭೂಮಿಯಿಂದ ತನ್ನ ನಾಗರೀಕರನ್ನು ಸುರಕ್ಷಿತವಾಗಿ ಮನೆಗೆ ಕರೆಸಿಕೊಂಡಿತ್ತು. ಉಕ್ರೇನ್-ರಷ್ಯಾ ಯುದ್ಧಕ್ಕೆ ಪ್ರಧಾನಿ ಮೋದಿ ತಾತ್ಕಾಲಿಕ ತಡೆ ನೀಡಿ ನಮ್ಮ ನಾಗರೀಕರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಯುದ್ಧವನ್ನು ನಿಲ್ಲಿಸಿ ತನ್ನ ದೇಶದ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸಿದ ಅಂತಹ ಪ್ರಧಾನಿ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ? ಪ್ರಧಾನಿ ಮೋದಿ ಅವರು ಪುಟಿನ್ ಮತ್ತು ಝೆಲೆನ್ಸ್ಕಿಯೊಂದಿಗೆ ಮಾತನಾಡಿ 22,500 ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದು ಹೇಳಿದರು.
ಇಷ್ಟು ಮಾತ್ರವಲ್ಲದೇ ಆಪರೇಷನ್ ಗಂಗಾ 2022 ರ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನೆರೆಯ ದೇಶಗಳಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ಸರ್ಕಾರವು ನಡೆಸಿದ ಸ್ಥಳಾಂತರಿಸುವ ಕಾರ್ಯಾಚರಣೆಯಾಗಿದೆ. ಈ ದೇಶಗಳ ನೆರವಿನೊಂದಿಗೆ ರೊಮೇನಿಯಾ, ಹಂಗೇರಿ, ಪೋಲೆಂಡ್, ಮೊಲ್ಡೊವಾ ಮತ್ತು ಸ್ಲೋವಾಕಿಯಾದಿಂದ ನಾಗರಿಕರನ್ನೂ ರಕ್ಷಿಸಿ ಭಾರತಕ್ಕೆ ರವಾನಿಸಲಾಯಿತು ಎಂದು ನಡ್ಡಾ ಹೇಳಿದ್ದಾರೆ.
Advertisement