ಮಂಗಳೂರು: ವಿಶೇಷಚೇತನರಿಗಾಗಿ ಮೀಸಲಿರುವ ಆಸನದಲ್ಲಿ ಕುಳಿತಿದ್ದ ಯುವಕನಿಗೆ ಅರ್ಹ ವ್ಯಕ್ತಿಗೆ ಆಸನ ಬಿಟ್ಟು ಕೊಡಲು ಸೂಚಿಸಿದ್ದಕ್ಕೆ ಆತ ಕೆಎಸ್ ಆರ್ ಟಿಸಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಈ ಘಟನೆ ನಡೆದಿದ್ದು ಸಂತ್ರಸ್ತೆ ನಿರ್ವಾಹಕಿ ಪುತ್ತೂರು ಕೆಎಸ್ ಆರ್ ಟಿಸಿ ವಿಭಾಗಕ್ಕೆ ಸೇರಿದ್ದಾರೆ.
17 ವರ್ಷದ ಯುವಕ ಈ ಕುಕೃತ್ಯ ಎಸಗಿದ್ದು, ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಮಹಿಳಾ ನಿರ್ವಾಹಕಿ ವಿಜಯ ಈ ಘಟನೆಯಿಂದ ಕಂಗಾಲಾಗಿದ್ದಾರೆ. ಘಟನೆಯನ್ನು ವಿವರಿಸಿರುವ ವಿಜಯ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಹಿಂದೆಂದೂ ತಾವು ಇಂತಹ ಘಟನೆ ಎದುರಿಸಿಲ್ಲ ಎಂದಿದ್ದಾರೆ.
ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ನಲ್ಲಿ ಜನದಟ್ಟಣೆ ಇತ್ತು. ಮಧ್ಯಾಹ್ನದ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾನು, ಮೊದಲ ಟ್ರಿಪ್ ನಲ್ಲಿದ್ದೆ. ಪುತ್ತೂರು ಮಾರುಕಟ್ಟೆ ಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಹಿರಿಯ ನಾಗರಿಕರೂ ಆಗಿರುವ ವಿಶೇಷ ಚೇತನರೊಬ್ಬರು ಬಸ್ ಹತ್ತಿದರು. ಜನದಟ್ಟಣೆಯಿಂದ ಕೂಡಿದ್ದ ಬಸ್ ನಲ್ಲಿ ಅವರು ನಿಲ್ಲುವುದಕ್ಕೂ ಆಗದೇ ಪರದಾಡುತ್ತಿದ್ದರು. ವಿಶೇಷಚೇತನರಿಗಾಗಿ ಮೀಸಲಾಗಿರಿಸಲಾಗಿದ್ದ ಆಸನದಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬನಿಗೆ ಜಾಗ ಬಿಟ್ಟುಕೊಡಲು ಸೂಚಿಸಿದೆ. ಆದರೆ ಇದಕ್ಕೆ ನಿರಾಕರಿಸಿದ ಆತ ನನ್ನನ್ನು ನಿಂದಿಸಲು ಆರಂಭಿಸಿ, ನನ್ನ ಮೇಲೆ ಕೈ ಹಾಕಿ ಶರ್ಟ್ ಎಳೆದು ನನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿದ. ಸಹ ಪ್ರಯಾಣಿಕರು ಧಾವಿಸಿ ನನ್ನ ಸಹಾಯಕ್ಕೆ ಬಂದರು. ಈ ಬೆನ್ನಲ್ಲೇ ಆರೋಪಿ ತಪ್ಪಿಸಿಕೊಂಡ.
16 ವರ್ಷಗಳ ವೃತ್ತಿ ಜೀವನದ ಅನುಭವದಲ್ಲಿ ವಿಜಯ ಅವರಿಗೆ ಹಿಂದೆಂದೂ ಇಂತಹ ಕೆಟ್ಟ ಅನುಭವವಾಗಿರಲಿಲ್ಲ. ಇಂದಿನ ಯುವಕರು ಹಿರಿಯರ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ, ವಿಶೇಷ ಚೇತನರೆಡೆಗೆ ಕಾಳಜಿ ಹೊಂದದೇ ಇರುವುದನ್ನು ಬಹುತೇಕ ಪ್ರತಿದಿನವೂ ನೋಡುತ್ತಿರುತ್ತೇನೆ. ಇಂತಹ ವರ್ತನೆ ಅಪಾಯಕಾರಿಯಾಗಿದ್ದು, ಮನುಷ್ಯತ್ವ ಹೊಂದಿರಬೇಕು. ಯುವಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ, ಮುಂದೆ ಯಾರೊಬ್ಬರೂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಧೈರ್ಯ ತೋರಬಾರದು ಎಂದು ನಿರ್ವಾಹಕಿ ಹೇಳಿದ್ದಾರೆ.
ಆರೋಪಿ ಯುವಕ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಹಾಗೂ 354 (ಮಹಿಳೆಗೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಸೆಕ್ಷನ್ 504, 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement