ಸಿಎಂ, ಸಚಿವರ ಹೆಲಿಕಾಫ್ಟರ್ ಬಾಡಿಗೆಗೆ 30 ಕೋಟಿ ರೂ.: 11,267 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಮಂಡನೆ

ರಾಜ್ಯ ಸರಕಾರ 2022-23ನೆ ಸಾಲಿಗೆ ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳಿಗೆ 1 ಸಾವಿರ ಕೋಟಿ ರೂ., ಮಠಗಳಿಗೆ 32 ಕೋಟಿ ರೂಪಾಯಿ ಸೇರಿದಂತೆ ಒಟ್ಟು 11,267 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳನ್ನು ಮಂಡನೆ ಮಾಡಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರಕಾರ 2022-23ನೆ ಸಾಲಿಗೆ ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳಿಗೆ 1 ಸಾವಿರ ಕೋಟಿ ರೂ., ಮಠಗಳಿಗೆ 32 ಕೋಟಿ ರೂಪಾಯಿ ಸೇರಿದಂತೆ ಒಟ್ಟು 11,267 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳನ್ನು ಮಂಡನೆ ಮಾಡಿದೆ.

ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪೂರಕ ಅಂದಾಜುಗಳನ್ನು ಮಂಡಿಸಿದರು.

ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು ಹಾಗೂ ಇತರೆ ಗಣ್ಯ ವ್ಯಕ್ತಿಗಳ ಅಧಿಕೃತ ಪ್ರವಾಸಕ್ಕೆ ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಿಲ್ ಪಾವತಿಸಲು 15 ಕೋಟಿ ರೂ.ಬಿಡುಗಡೆ ಮಾಡಿದ್ದು, 15 ಕೋಟಿ ರೂ. ಹೆಚ್ಚುವರಿ ಸಹಿತ ಒಟ್ಟು 30ಕೋಟಿ ರೂ.ಗಳನ್ನು ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.

ಸಾರಿಗೆ, ವಸತಿ, ಜವಳಿ ಸಚಿವರು, ಬಾಗಲಕೋಟೆ ಹಾಗೂ ಕೋಲಾರ ಸಂಸದರ ಉಪಯೋಗಕ್ಕಾಗಿ 5 ಹೊಸ ಕಾರುಗಳ ಖರೀದಿಗೆ ಒಟ್ಟು 1.39 ಕೋಟಿ ರೂ.ಗಳನ್ನು ಪಾವತಿಸಲು ಪೂರಕ ಅಂದಾಜುಗಳಲ್ಲಿ ಹಣ ನೀಡಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿಗೆ 1 ಸಾವಿರ ಕೋಟಿ ರೂ., ಸಿಎಂ ವಿವೇಚನಾ ನಿಧಿಯಡಿ ಮಠ ಹಾಗೂ ದೇವಾಲಯಗಳಿಗೆ 32 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಇಂಧನ ಇಲಾಖೆ ವ್ಯಾಪ್ತಿಯಲ್ಲಿ 2022ರ ಅಕ್ಟೋಬರ್ ನಿಂದ 2023ರ ಮಾರ್ಚ್ ವರೆಗೆ ಇಂಧನ ಹೊಂದಾಣಿಕೆ ವೆಚ್ಚ ಪಾವತಿಗೆ 300 ಕೋಟಿ ರೂ. ಹೆಚ್ಚುವರಿ ಮೊತ್ತ, ಸಬ್ಸಿಡಿ ಬಾಕಿ ಮೊತ್ತ ಪಾವತಿಸಲು 1,600 ಕೋಟಿ ರೂ. ಸಹಿತ ಇಂಧನ ಇಲಾಖೆಗೆ 1,900 ಕೋಟಿ ರೂ. ಪೂರಕ ಅಂದಾಜುಗಳಲ್ಲಿ ಮೀಸಲಿಡಲಾಗಿದೆ.

ಜಲ ಸಂಪನ್ಮೂಲ-2,550 ಕೋಟಿ ರೂ., ಇಂಧನ-1,900 ಕೋಟಿ ರೂ., ಲೋಕೋಪಯೋಗಿ-1,503 ಕೋಟಿ ರೂ., ನಗರಾಭಿವೃದ್ಧಿ-1,355 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ-1050 ಕೋಟಿ ರೂ., ಸಹಕಾರ-1,061 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆ-513 ಕೋಟಿ ರೂ.ಗಳನ್ನು ಪೂರಕ ಅಂದಾಜುಗಳಲ್ಲಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com