ಐಎಎಸ್-ಐಪಿಎಸ್ ಮಹಿಳಾ ಅಧಿಕಾರಿಗಳ ಜಗಳ: ಇಲಾಖಾ ಮಟ್ಟದ ತನಿಖೆಗೆ ಸರ್ಕಾರ ಆದೇಶ, ಇಬ್ಬರಿಗೂ ನೊಟೀಸ್
ಬೆಂಗಳೂರು: ಸರ್ಕಾರದ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ನಡುವಿನ ಕಿತ್ತಾಟದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು ಸುಳ್ಳಲ್ಲ. ಈ ರೀತಿ ಬಹಿರಂಗವಾಗಿ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿರುವ ಮಹಿಳಾ ಅಧಿಕಾರಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಬೇಕು, ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎಂದು ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿಯೂ ಅಭಿಪ್ರಾಯ, ಆರೋಪಗಳು ಕೇಳಿಬಂದಿತ್ತು.
ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀತಿ ಮಾನಹಾನಿಕಾರಕ ಪೋಸ್ಟ್ ಗಳನ್ನು ಹಾಕದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಕೋರ್ಟ್ ಇಬ್ಬರಿಗೂ ತಾಕೀತು ಮಾಡಿದೆ.
ಸರ್ಕಾರದಿಂದ ತನಿಖೆಗೆ ಆದೇಶ: ಪ್ರಕರಣ ಸಂಬಂಧ ಇಲಾಖಾ ಮಟ್ಟದಲ್ಲಿ ತನಿಖೆಗೆ ಆದೇಶಿಸಿ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದೇಶದ ಮೇರೆಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಲು ನೊಟೀಸ್ ಜಾರಿ ಮಾಡಿದ್ದಾರೆ.
ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳನ್ನು ಇಬ್ಬರೂ ಅಧಿಕಾರಿಗಳು ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ನೀಡಿದೆ. ಮುಖ್ಯ ಕಾರ್ಯದರ್ಶಿಗಳು ಈ ಹಿಂದೆ ಇಬ್ಬರೂ ಅಧಿಕಾರಿಗಳನ್ನು ಕರೆಸಿ, ಪರಸ್ಪರರ ವಿರುದ್ಧ ಹೇಳಿಕೆ ನೀಡದಂತೆ ಸೂಚಿಸಿದ್ದರು. ಐಪಿಎಸ್ ಅಧಿಕಾರಿ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ