2025ರ ವೇಳೆಗೆ 'ತಂಬಾಕು ಮುಕ್ತ ಪೀಳಿಗೆ'ಗಾಗಿ ನ್ಯೂಜಿಲೆಂಡ್ ಮಾದರಿಯತ್ತ ಕರ್ನಾಟಕದ ಚಿತ್ತ

2008ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸುವ ಹೊಸ ಕಾನೂನನ್ನು ಅಂಗೀಕರಿಸಿದ ನ್ಯೂಜಿಲೆಂಡ್‌ನಿಂದ ಪ್ರೇರಿತವಾಗಿರುವ ರಾಜ್ಯ ಆರೋಗ್ಯ ಇಲಾಖೆಯು, 2025 ರ ವೇಳೆಗೆ ತಂಬಾಕು ಮುಕ್ತ ಪೀಳಿಗೆಯನ್ನು (ಜನರೇಷನ್) ರಚಿಸಲು ಕರ್ನಾಟಕಕ್ಕೆ ಇದೇ ಮಾದರಿಯನ್ನು ತರಲು ಮುಂದಾಗಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 2008ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸುವ ಹೊಸ ಕಾನೂನನ್ನು ಅಂಗೀಕರಿಸಿದ ನ್ಯೂಜಿಲೆಂಡ್‌ನಿಂದ ಪ್ರೇರಿತವಾಗಿರುವ ರಾಜ್ಯ ಆರೋಗ್ಯ ಇಲಾಖೆಯು, 2025 ರ ವೇಳೆಗೆ ತಂಬಾಕು ಮುಕ್ತ ಪೀಳಿಗೆಯನ್ನು (ಜನರೇಷನ್) ರಚಿಸಲು ಕರ್ನಾಟಕಕ್ಕೆ ಇದೇ ಮಾದರಿಯನ್ನು ತರಲು ಮುಂದಾಗಿದೆ. 

ನ್ಯೂಜಿಲೆಂಡ್ ಮಾದರಿಯನ್ನು ಅಳವಡಿಸಿಕೊಳ್ಳುವುದರ ಪರಿಣಾಮವಾಗಿ, ವರ್ಷಗಳು ಕಳೆದಂತೆ, ಕಡಿಮೆ ಜನರು ಮಾತ್ರ ತಂಬಾಕು ಖರೀದಿಸಲು ಸಾಧ್ಯವಾಗುತ್ತದೆ ಮತ್ತು ತಂಬಾಕು ಮುಕ್ತ ಪೀಳಿಗೆಗೆ ದಾರಿ ಮಾಡಿಕೊಡುತ್ತದೆ.

ಆರೋಗ್ಯ ಇಲಾಖೆಯ ವಿಭಾಗವಾದ ರಾಜ್ಯ ತಂಬಾಕು ನಿಯಂತ್ರಣ ಕೋಶವು ಈ ಸಂಬಂಧ ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಅದರ ದೃಷ್ಟಿಯ ಪ್ರಕಾರ, 2007ರಲ್ಲಿ ಮತ್ತು ನಂತರ ಜನಿಸಿದ ಎಲ್ಲರಿಗೂ ಕರ್ನಾಟಕದಾದ್ಯಂತ ಯಾವುದೇ ತಂಬಾಕು ಉತ್ಪನ್ನಗಳಿಗೆ ಪ್ರವೇಶವಿಲ್ಲ.

'ತಂಬಾಕು ಬಳಕೆಗೆ ಕಾನೂನುಬದ್ಧ ವಯಸ್ಸು 18 ವರ್ಷ ಆಗಿದೆ. 2007ರಲ್ಲಿ ಮತ್ತು ನಂತರ ಜನಿಸಿದವರು 2025ರ ವೇಳೆಗೆ 18 ವರ್ಷಗಳನ್ನು ತಲುಪುತ್ತಾರೆ. 18 ವರ್ಷಗಳ ನಂತರವೂ ನಾವು ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವ ಸಮಾಜವನ್ನು ನಿರ್ಮಿಸಲು ಬಯಸುತ್ತೇವೆ. ಉದಾಹರಣೆಗೆ, 2007ರಲ್ಲಿ ಜನಿಸಿದವರಿಗೆ 2030 ರಲ್ಲಿ 23 ವರ್ಷಗಳಾಗಿರುತ್ತದೆ. ಆದರೆ, ಅವರು ತಂಬಾಕು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ವರ್ಷಗಳು ಕಳೆದಂತೆ ತಂಬಾಕು ಸೇವಿಸುವವರ ಸಂಖ್ಯೆ ಕಡಿಮೆಯಾಗಲಿದೆ' ಎಂದು ಈ ಕ್ರಮದ ಬಗ್ಗೆ ಅರಿವಿರುವ ಮೂಲವೊಂದು ಹೇಳಿದೆ.

ತಂಬಾಕನ್ನು ಪ್ರಯೋಗಿಸಿ ವ್ಯಸನಕ್ಕೆ ಒಳಗಾಗುವ ಮಕ್ಕಳಿಂದ ಸುಲಭವಾಗಿ ತಂಬಾಕು ಸೇವನೆಯನ್ನು ಕೊನೆಗಾಣಿಸುವುದು ಇದರ ಸಂಪೂರ್ಣ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ. 

'ಬಹುಪಾಲು ತಂಬಾಕು-ಬಳಕೆದಾರರು ತಮ್ಮ ಬಾಲ್ಯ ಮತ್ತು ಹದಿಹರೆಯದಲ್ಲಿ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ. ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ 2 ರ ಪ್ರಕಾರ, ಕರ್ನಾಟಕದಲ್ಲಿ 22.8 ಪ್ರತಿಶತ (ಸುಮಾರು 2.5 ಕೋಟಿ) ವಯಸ್ಕರು ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಯುವಕರು ನಮ್ಮ ರಾಷ್ಟ್ರದ ಸಂಪತ್ತು ಮತ್ತು ಈ ತಂಬಾಕು ಮುಕ್ತ ಪೀಳಿಗೆಯ ಕ್ರಮವು ಮಕ್ಕಳಿಗೆ ತಂಬಾಕು ಸುಲಭವಾಗಿ ಲಭ್ಯವಾಗುವ ಮೂಲ ಕಾರಣವನ್ನು ತಪ್ಪಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com