ಹಿಜಾಬ್ ವಿವಾದಕ್ಕೆ ಒಂದು ವರ್ಷ, ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಾರತಮ್ಯ: ವರದಿ

ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ.

ಪಿಯುಸಿಎಲ್ -ಕೆ ತಂಡ ಇತ್ತೀಚೆಗೆ ಕರ್ನಾಟಕದ ರಾಯಚೂರು, ಉಡುಪಿ, ಹಾಸನ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಜಿಲ್ಲಾಡಳಿತವನ್ನು ಸಂದರ್ಶನ ಮಾಡಿತ್ತು. 'Closing the Gates of Education: Violations of Rights of Muslim Women Students’, ಎಂಬುದು ಸಂದರ್ಶನದ ಶೀರ್ಷಿಕೆ. ಶಾಲೆ-ಕಾಲೇಜುಗಳಲ್ಲಿ ತಮಗೆ ಕಿರುಕುಳ, ತಾರತಮ್ಯ ನೀಡುತ್ತಿದ್ದು ಇದರಿಂದ ಬೇಸತ್ತು ಹಲವರು ಸರ್ಕಾರಿ ಕಾಲೇಜಿನಿಂದ ಅಲ್ಪಸಂಖ್ಯಾತ ಸಮುದಾಯಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳು, ಬಡ ಕೆಳ ವರ್ಗದ ಸಮುದಾಯಗಳು, ಆದಿವಾಸಿ ವಿದ್ಯಾರ್ಥಿನಿಯರು ತರಗತಿಗಳಲ್ಲಿ ತಮಗೆ ತೋರಿಸುತ್ತಿರುವ ತಾರತಮ್ಯಗಳ ಅನುಭವ ಹಂಚಿಕೊಂಡಿದ್ದು ಇದರಿಂದ ತಮ್ಮ ಆತ್ಮವಿಶ್ವಾಸಕ್ಕೆ ಹೇಗೆ ಧಕ್ಕೆಯುಂಟಾಗುತ್ತಿದೆ ಮತ್ತು ಉನ್ನತ ವ್ಯಾಸಂಗ ಮಾಡಬೇಕೆಂಬ ಆಸೆ, ಆಕಾಂಕ್ಷೆಗಳಿಗೆ ತೊಂದರೆಯುಂಟಾಗುತ್ತಿದೆ, ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ವಿಭಜನೆಯ ತಾರತಮ್ಯ ನೀತಿ ಅನುಸರಿಸಿದರೆ ವಿಭಜಕ ಸಮಾಜದ ಪ್ರವೃತ್ತಿ ಮತ್ತಷ್ಟು ಬೆಳೆಯುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.

ನಾನು ಕಾಲೇಜು ತೊರೆದು ಹಿಜಾಬ್ ಧರಿಸಲು ಅವಕಾಶ ನೀಡುವ ಬೇರೆ ಕಾಲೇಜನ್ನು ಹುಡುಕಿದೆ. ಸರ್ಕಾರಿ ಕಾಲೇಜಿನಲ್ಲಿ ಉಚಿತ ಶಿಕ್ಷಣವಿದೆ, ಆದರೆ ಈಗ ನಾನು ಸೇರಿರುವ ಹೊಸ ಕಾಲೇಜಿನಲ್ಲಿ ಪ್ರಯಾಣ ವೆಚ್ಚವೇ ಜಾಸ್ತಿಯಾಗುತ್ತದೆ. ನನಗೆ ಎಂಎಸ್ಸಿ ಮಾಡಬೇಕೆಂದು ಆಸೆಯಿತ್ತು. ಅದೀಗ ಸಾಧ್ಯವಾಗುತ್ತಿಲ್ಲ. ನನ್ನ ಕನಸುಗಳು ನುಚ್ಚುನೂರಾಗಿದೆ ಎಂದು ವಿದ್ಯಾರ್ಥಿನಿಯೋರ್ವಳು ಸಂದರ್ಶನ ವೇಳೆ ತಮ್ಮ ಸಂಕಷ್ಟ ತೋಡಿಕೊಂಡಿದ್ದಾಳೆ. ಹಿಜಾಬ್ ವಿವಾದವಾದ ನಂತರ ಮುಸ್ಲಿಂ ಸಮುದಾಯದ ಮುಖಂಡರು, ಹಿರಿಯರ ನೆರವು, ಬೆಂಬಲವನ್ನು ಈ ವಿದ್ಯಾರ್ಥಿನಿಯರು ಕೋರುತ್ತಿದ್ದಾರೆ.

ಹಿಜಾಬ್ ವಿವಾದವಾದ ನಂತರ ನಮ್ಮ ನೆರೆಮನೆಯವರು, ಸ್ನೇಹಿತರ ಮನೋಭಾವನೆಯಲ್ಲಿ ಹಠಾತ್ ಬದಲಾವಣೆ ಕಂಡಿತು. ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಸಮುದಾಯದಲ್ಲಿಯೇ ಬೆಂಬಲ ನಿರೀಕ್ಷಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿನಿ ಹೇಳುತ್ತಾರೆ.

ಕ್ಯಾಂಪಸ್‌ಗಳಲ್ಲಿ ಪೊಲೀಸರ ಉಪಸ್ಥಿತಿ, ಪುರುಷ ವಿದ್ಯಾರ್ಥಿಗಳೊಂದಿಗೆ ವಿನಾಕಾರಣ ಘರ್ಷಣೆ, ಅವರನ್ನು ಕೊಲ್ಲುವ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸುವ ಬೆದರಿಕೆ ಹಾಕಿರುವುದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಮತ್ತಷ್ಟು ವಿಚಲಿತಗೊಳಿಸಿದೆ. ನಾವು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದೇವೆ, ಮಧ್ಯಸ್ಥಿಕೆಗೆ ಮನವಿ ಮಾಡಿದ್ದೇವೆ, ಆದರೆ ಪ್ರಾಂಶುಪಾಲರು ಮಾತುಕತೆ ನಡೆಸಲು ನಿರಾಕರಿಸುತ್ತಿದ್ದಾರೆ ಎಂದು ಉಡುಪಿಯ ವಿದ್ಯಾರ್ಥಿನಿಯೊಬ್ಬಳು ಹೇಳುತ್ತಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com