ರಾಮನಗರದ ಪಿಚ್ಚನಕೆರೆ ಬಳಿ ಶಾಲಾ ಬಸ್ಸಿನಿಂದ ಕೆಳಗೆ ಬಿದ್ದು ಬಾಲಕಿ ಸಾವು: ಶಾಲೆ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಚಾಲಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಶಾಲಾ ಬಸ್‌ನಿಂದ ಕೆಳಗೆ ಬಿದ್ದು ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ನಿನ್ನೆ ಸೋಮವಾರ ಸಂಜೆ ನಡೆದಿದೆ. 
ಮೃತ ಬಾಲಕಿ ರಕ್ಷಿತಾ
ಮೃತ ಬಾಲಕಿ ರಕ್ಷಿತಾ

ಹಾರೋಹಳ್ಳಿ (ರಾಮನಗರ): ಚಾಲಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಶಾಲಾ ಬಸ್‌ನಿಂದ ಕೆಳಗೆ ಬಿದ್ದು ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ನಿನ್ನೆ ಸೋಮವಾರ ಸಂಜೆ ನಡೆದಿದೆ. 

ಮೃತ ಮಗು ಸಿದ್ದೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರ ಮಗಳು 6 ವರ್ಷದ ರಕ್ಷಿತಾ ಆಗಿದ್ದು ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್‌ನ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಳು. 

ಎಂದಿನಂತೆ ನಿನ್ನೆ ಸಂಜೆ ಶಾಲೆ ಮುಗಿಸಿ ಬಸ್‌ನಲ್ಲಿ ಮನೆಗೆ ಬರುವ ಸಂದರ್ಭದಲ್ಲಿ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿಯು ಬಸ್‌ನ ಬಾಗಿಲು ಹಾಕಿರಲಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ರಕ್ಷಿತಾ ಕೆಳಗಿ ಬಿದ್ದಿದ್ದಾಳೆ. ಬಿದ್ದಾಗ ಬಸ್ ಹಿಂದಿನ ಚಕ್ರ ತಲೆಯ ಮೇಲೆ ಹತ್ತಿದ್ದು, ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ರಕ್ಷಿತಾ ಪ್ರಾಣಪಕ್ಷಿ ಹಾರಿಹೋಗಿದೆ. 

ಬಸ್‌ನಿಂದ ವಿದ್ಯಾರ್ಥಿನಿ ಬಿದ್ದು ಮರಣ ಹೊಂದಿದ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಬಸ್ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮಗಳು ಬಸ್‌ನಿಂದ ಬಿದ್ದು ಸತ್ತ ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ಬಂದು ಗೋಳಾಡುತ್ತಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಶಾಲಾ ಸಿಬ್ಬಂದಿಗಳ ವಿರುದ್ದ ಹಿಡಿಶಾಪ ಹಾಕಿದರು.

ಶಾಲೆಯ ಸಿಬ್ಬಂದಿಗಳು ತಮ್ಮ ಬೇಜವಾಬ್ದಾರಿತನದಿಂದ ಒಂದು ಮುಗ್ದ ಜೀವವನ್ನು ಬಲಿ ತೆಗೆದುಕೊಂಡಿದ್ದು, ಅವರ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಶಾಲೆಯ ವಿರುದ್ದ ಹಾಗೂ ಸಿಬ್ಬಂದಿ ವಿರುದ್ದ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com