ಮೈಸೂರು: ವೇಶ್ಯಾವಾಟಿಕೆ ಕಿಂಗ್‌ಪಿನ್ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ. ಇದರ ನಡುವೆ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಾಗಿದೆ.
ಚೆಕ್ ಕಳ್ಳತನ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಸ್ಟೇಷನ್ನಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಅವರ ಎರಡನೇ ಪತ್ನಿ ಸೋಮವಾರ ದೂರು ನೀಡಿದ್ದಾರೆ. ಅವರು ಪೊಲೀಸರಿಗೆ ನೀಡಿರುವ ದೂರಿನ ವಿವರ ಇಲ್ಲಿದೆ.
"ಸೆಪ್ಟೆಂಬರ್ 22, 2022 ರಂದು ನಾನು ಮೈಸೂರಿನ ದೇವರಾಜ ಮಾರ್ಕೆಟ್ಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ. ಸ್ಯಾಂಟ್ರೋ ರವಿ ಮತ್ತು ಪ್ರಕಾಶ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಚೆಕ್ ಬುಕ್ ಕಳವು ಮಾಡಿದ್ದಾರೆ. ಬಳಿಕ ನನ್ನ ಚೆಕ್ ಬುಕ್ ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಸೈನ್ ಮಾಡಿರುವ ಎರಡು ಚೆಕ್ ಅನ್ನು ಕೆನರಾ ಬ್ಯಾಂಕ್ಗೆ ನೀಡಿದ್ದಾರೆ. ನನ್ನ ಪತಿಯೇ ಚೆಕ್ ಕದ್ದು ದುರ್ಬಳಕೆ ಮಾಡಿಕೊಂಡಿರೋದು ಗೊತ್ತಾಗಿದೆ. 10 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿದ್ದ ಪ್ರಕಾಶ್, 2022ರಲ್ಲಿ ಇದೇ ಚೆಕ್‌ಲೀಫ್ ಬಳಸಿ 5 ಲಕ್ಷ ರೂ. ಕೇಸ್ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಇನ್ನೆರಡು ಚೆಕ್ ಹಾಗೆಯೇ ಇಟ್ಟುಕೊಂಡಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಸ್ಟೇಷನ್ನಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ" ಎಂದು ಪತಿ ವಿರುದ್ಧ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ಥೆ ನೀಡಿದ ದೂರು ಆಧರಿಸಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಸ್ಯಾಂಟ್ರೋ’ ರವಿ ಪ್ರಕರಣದ ಕುರಿತು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ ನಂತರ, ನಾಲ್ವರು ಸದಸ್ಯರ ತಂಡ ಮೈಸೂರಿಗೆ ಆಗಮಿಸಿದ್ದು, ವಿಜಯನಗರ ಪೊಲೀಸರು ಸಂಬಂಧಪಟ್ಟ ಕಡತಗಳನ್ನು ಹಸ್ತಾಂತರಿಸಿದ್ದಾರೆ. ಅವರ ಕಸ್ಟಡಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಮಂಗಳವಾರ ನ್ಯಾಯಾಲಯ ಅವರನ್ನು ಸಿಐಡಿ ವಶಕ್ಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Advertisement