ಗೊಂದಲ ಬೇಡ: 'ಕುಡಿದು' ತೂರಾಡಲು ನಿಮಗೆ 21 ವರ್ಷ ವಯಸ್ಸಾಗಿರಲೇಬೇಕು! ಕರಡು ನಿಯಮ ಹಿಂಪಡೆದ ಸರ್ಕಾರ
ಬೆಂಗಳೂರು: ಮದ್ಯಸೇವನೆಯ ವಯೋಮಿತಿಯನ್ನು ಈಗ ಇರುವ 21 ವರ್ಷದಿಂದ 18 ವರ್ಷಕ್ಕೆ ಇಳಿಸುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಸಾರ್ವಜನಿಕ ವಿರೋಧ ವ್ಯಕ್ತವಾದ ಕಾರಣ ಆ ನಿರ್ಧಾರದಿಂದ ಹಿಂದೆ ಸರಿದಿದೆ.
ರಾಜ್ಯದಲ್ಲಿ ಮದ್ಯ ಖರೀದಿ ಮಾಡುವ ವ್ಯಕ್ತಿಯ ಕನಿಷ್ಠ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಅಬಕಾರಿ ಇಲಾಖೆಯ ಕರಡು ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕರಡು ನಿಯಮವನ್ನು ಹಿಂಪಡೆಯಲಾಗಿದೆ. 21 ವರ್ಷದ ಕೆಳಗಿನ ವ್ಯಕ್ತಿಗೆ ಮದ್ಯ ಮಾರಾಟ ಮಾಡಬಾರದು ಎಂಬ ನಿಯಮವನ್ನು 18 ವರ್ಷ ಎಂದು ಬದಲಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ಸಂಬಂಧ ಜ.9 ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿದ್ದರೆ 30 ದಿನಗಳೊಳಗಾಗಿ ಸಲ್ಲಿಸಲು ತಿಳಿಸಿತ್ತು. ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜ.18 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಬಕಾರಿ ಆಯುಕ್ತರು, ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮಕ್ಕೆ ತಿದ್ದುಪಡಿ ತಂದು ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಉದ್ದೇಶಿಸಿದ್ದ ತಿದ್ದುಪಡಿ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣಾ ವರ್ಷದಲ್ಲಿ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧಾರಿಸಿದೆ.
ಇನ್ನು ಈ ಯತ್ನಕ್ಕೆ ಸಮರ್ಥನೆಯನ್ನೂ ನೀಡಿರುವ ಅವರು, ಅಬಕಾರಿ ಅಧಿನಿಯ-1965ರ ಕಲಂ 36 (1)(ಬಿ) ಅನ್ವಯ 18 ವರ್ಷದೊಳಗಿನವರೆಗೆ ಮದ್ಯ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ, ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ನಿಯಮ 10(1)(ಇ) ಪ್ರಕಾರ 21 ವರ್ಷದೊಳಗಿರುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬಾರದು ಎಂದು ಹೇಳಲಾಗಿದೆ.
ಇಲ್ಲಿ ಮೊದಲ ನಿಯಮದಲ್ಲಿ 18 ವರ್ಷ ಹಾಗೂ ಎರಡನೇ ನಿಯಮದಲ್ಲಿ 21 ವರ್ಷ ಇದೆ. ಈ ಗೊಂದಲ ನಿವಾರಿಸಲು 21 ವರ್ಷ ಎಂದು ಇರುವಲ್ಲಿ 18 ವರ್ಷ ಎಂದು ಉಲ್ಲೇಖಿಸಲು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ಹೀಗಾಗಿ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು ಎಂದು ಕರಡು ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ